Super Napier Grass: ಹುಲ್ಲು ಬೆಳೆದರೆ ಮಾತ್ರ ಹೈನುಗಾರಿಕೆ ಕೈಹಿಡಿದು ನಡೆಸುತ್ತದೆ. ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ. ಕೆಲವು ಪ್ರದೇಶದಲ್ಲಿ ಹುಲ್ಲುವಿನ ಅಭಾವ ತುಂಬಾ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಹಾಲಿನಿಂದ ಸಿಗುವ ಆದಾಯದಲ್ಲಿ ಶೇಕಡಾ 60 ರಷ್ಟು ಅದರ ಆಹಾರಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ವ್ಯಯ ಮಾಡುತ್ತಿರುವ ಖರ್ಚು ಅಧಿಕವಾಗುತ್ತಿದೆ ಹಾಗೂ ಆದಾಯ ಕಡಿಮೆಯಾಗುತ್ತಿದೆ. ಇದೀಗ ಆ ಸಮಸ್ಯೆಗೆ ಇಲ್ಲಿ ಹೊಸ ಹುಲ್ಲಿನ ತಳಿ ಒಂದನ್ನು ಪರಿಚಯ ಮಾಡಿಕೊಡಲಾಗಿದೆ.
ಮುಖ್ಯವಾಗಿ ಲಕ್ಷಾಂತರ ರಾಜಸ್ಥಾನದ ಕುಟುಂಬಗಳಿಗೆ ಹೈನುಗಾರಿಕೆ ಜೀವನಾಧಾರವಾಗಿದೆ. ಮರುಭೂಮಿಯಲ್ಲಿ ಜಾನುವಾರುಗಳನ್ನು ಮೇಯಿಸಲು ಒಣ ಹುಲ್ಲು ಮಾತ್ರ ಲಭ್ಯವಿರುತ್ತದೆ. ವರ್ಷಕ್ಕೊಮ್ಮೆ ಬೀಳುವ ಮಳೆನೀರಿನಿಂದ ಬೆಳೆಯುವ ಉದ್ದಿನ ಬೇಳೆ ಮತ್ತು ಪೇರಲದ ಒಣ ದಂಟುಗಳು ವರ್ಷಗಟ್ಟಲೆ ಮೇವಾಗಿ ಬಳಕೆಯಾಗುತ್ತಿವೆ.
ಆದರೆ ಈಗ ಜಾನುವಾರು ಮೇವಿನ ಆವಿಷ್ಕಾರವು ಪರಿಸ್ಥಿತಿಯನ್ನು ಬದಲಾಯಿಸಿದೆ. ಕಬ್ಬಿನಂತೆಯೇ ಕಾಣುವ ಸೂಪರ್ ನೇಪಿಯರ್ ಹುಲ್ಲು ಕೃಷಿಕರಿಗೆ ಹಾಗೂ ಜಾನುವಾರು ಸಾಕಣೆದಾರರಲ್ಲಿ ಬಹಳ ಬೆಳವಣಿಗೆ ತಂದಿದೆ.
ಹೌದು, ಸೂಪರ್ ನೇಪಿಯರ್ ಹುಲ್ಲು (Super Napier Grass) ಮೂಲತಃ ಥೈಲ್ಯಾಂಡ್ನ ಉತ್ಪನ್ನವಾಗಿದೆ. ಇದನ್ನು ಆನೆ ಕಡ್ಡಿ ಎಂದೂ ಕರೆಯುತ್ತಾರೆ. ಈ ಹುಲ್ಲಿನಲ್ಲಿ ವಿವಿಧ ಪೋಷಕಾಂಶಗಳಿವೆ. ಇದನ್ನು ಹಾಲುಕರೆಯುವ ಜಾನುವಾರುಗಳಿಗೆ ನೀಡುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ.
ಆನೆ ಹುಲ್ಲು ಎಂದೂ ಕರೆಯುವ ಇದರ ದೊಡ್ಡ ಪ್ರಯೋಜನವೆಂದರೆ ಅದು ಜಾನುವಾರುಗಳ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದು ಅವರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ.
ತೈಲ ಪರಿಶೋಧನೆಯಲ್ಲಿ ತೊಡಗಿರುವ ಕೈರ್ನ್ ವೇದಾಂತ ಕಂಪನಿ ರಾಜಸ್ಥಾನದ ಗಡಿಭಾಗದಲ್ಲಿರುವ ಬಾರ್ಮರ್ ಮತ್ತು ಜಲೋರ್ ಜಿಲ್ಲೆಗಳ ಜಾನುವಾರು ಸಾಕಣೆದಾರರೊಂದಿಗೆ ತಮ್ಮ ಜಮೀನಿನಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ.
ಬಾರ್ಮರ್ ಮತ್ತು ಜಲೋರ್ ಜಿಲ್ಲೆಗಳಲ್ಲಿ ಕೈರ್ನ್ ವೇದಾಂತ ಡೈರಿ ಡೆವಲಪ್ಮೆಂಟ್ ಕಂಪನಿ ಕೈಗೊಂಡಿರುವ ಪಶುಸಂಗೋಪನೆ ಯೋಜನೆಗಳು ಯಶಸ್ವಿ ಬದಲಾವಣೆಗಳನ್ನು ತರುತ್ತಿವೆ. ಒಣ ಮೇವಿಗಾಗಿ ಬಂಜರು ಭೂಮಿ ನೆಲದಲ್ಲಿ ಸೂಪರ್ ನೇಪಿಯರ್ ಹುಲ್ಲು ಬೆಳೆಸಿ ಜಾನುವಾರುಗಳಿಗೆ ಹಸಿರು ಮೇವನ್ನು ಒದಗಿಸುವಂತಾಗಿದೆ.
ಈ ಹುಲ್ಲು ಹಸಿರನ್ನು ಹೆಚ್ಚಿಸಿ ರೈತರಿಗೆ ಧೈರ್ಯ ತುಂಬಿದೆ. ಈ ಬಗ್ಗೆ ನಿರ್ವಾಹಕ ಹನುಮಾನ್ ರಾಮ್ ಚೌಧರಿ ಮಾತನಾಡಿ, 2007 ರಿಂದ ಬಾರ್ಮರ್ನ ಕೈರ್ನ್ ವೇದಾಂತ ಫೌಂಡೇಶನ್ ಮೂಲಕ ಡೈರಿ ಅಭಿವೃದ್ಧಿ ಮತ್ತು ಪಶುಸಂಗೋಪನೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯಡಿ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. 2014 ರಿಂದ, ಬಾರ್ಮರ್ ಮತ್ತು ಜಾಲೋರ್ನಲ್ಲಿ ನೇಪಿಯರ್ ಹುಲ್ಲನ್ನು ಬೆಳೆಸಲಾಗುತ್ತಿದೆ ಎನ್ನಲಾಗಿದೆ.
ಈ ಹುಲ್ಲನ್ನು ಒಮ್ಮೆ ನಾಟಿ ಮಾಡಿದರೆ ಐದು ವರ್ಷಗಳವರೆಗೆ ಇಳುವರಿ ನೀಡುತ್ತಿರುತ್ತದೆ. ಇದು ಬಿದಿರಿನಂತೆ ಎತ್ತರವಾಗಿ ಬೆಳೆಯುತ್ತದೆ. ಇದನ್ನು ಪರಿಸರ ವಿಜ್ಞಾನಿಗಳು ಭವಿಷ್ಯದ ಹುಲ್ಲು ಎಂದು ವರ್ಣಿಸಿದ್ದಾರೆ . ಇದರ ಮತ್ತೊಂದು ವಿಶೇಷವೆಂದರೆ ಕಡಿಮೆ ನೀರು ಹಾಗೂ ಗೊಬ್ಬರದಲ್ಲಿ ಬೆಳೆಯುತ್ತದೆ. ಕೀಟಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಈ ಹುಲ್ಲಿನಲ್ಲಿ ಸಮೃದ್ಧ ಪೋಷಕಾಂಶಗಳಿವೆ.
ಇತ್ತೀಚಿನ ದಿನಗಳಲ್ಲಿ ನೇಪಿಯರ್ ಹುಲ್ಲು ಬಹಳ ಜನಪ್ರಿಯಯವಾಗುತ್ತಿದೆ. ಒಮ್ಮೆ ಬಿತ್ತಿದರೆ ಐದು ವರ್ಷಗಳ ಕಾಲ ನಿರಂತರವಾಗಿ ಫಸಲು ಕೊಡುತ್ತದೆ. ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ಹುಲ್ಲು 15 ಅಡಿ ಎತ್ತರ ಬೆಳೆಯುತ್ತದೆ. ವರ್ಷಕ್ಕೆ 7ರಿಂದ 8 ಬಾರಿ ಕಟಾವಿಗೆ ಬರುತ್ತದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಈ ಹುಲ್ಲಿನಿಂದ ಒಂದು ಎಕರೆಯಲ್ಲಿ ಒಂದು ವರ್ಷದಕ್ಕೆ ಕಡಿಮೆ ಅಂದರೂ 2. 5 ಲಕ್ಷದಿಂದ 4.5ಲಕ್ಷದ ವರೆಗೆ ರೈತರು ಗಳಿಸಿಕೊಳ್ಳಬಹುದಾಗಿದೆ. ನೀರಿನ ಅಭಾವ ಇರುವ ಜಾಗದಲ್ಲೂ ಬೆಳೆ ಬೆಳೆಯಬಹುದು. ಜೊತೆಗೆ ಮೇಕೆ, ಹಸು, ಎಮ್ಮೆ ಸಾಕಾಣಿಕೆ ಮಾಡುವವರಿಗೂ ಈ ಬೆಳೆ ಸೂಕ್ತವಾಗಿದೆ.
