ಕಡಬ: ಸ್ಕಾರ್ಪಿಯೋ ಕಾರು ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆಯೊಂದು ಇಲ್ಲಿನ ಕಳಾರ ಎಂಬಲ್ಲಿ ನಡೆದಿದೆ.
ಮೃತ ಸವಾರ ನನ್ನು ಉಮ್ಮರ್ ಕಳಾರ ಎಂದು ಗುರುತಿಸಲಾಗಿದೆ. ಉಮ್ಮರ್ ತನ್ನ ಸ್ಕೂಟಿಯಲ್ಲಿ ಕಡಬ ಕಡೆಯಿಂದ ಬಂದು ಕಳಾರ ಬಳಿ ತನ್ನ ಮನೆಯತ್ತ ತಿರುಗಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟಿ ಹಾಗೂ ಸವಾರ ಕೆಲ ದೂರ ಎಸೆಯಲ್ಪಟ್ಟ ಪರಿಣಾಮ ಗಂಭೀರ ಗಾಯಗೊಂಡ ಸವಾರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ತಿಳಿದುಬಂದಿದೆ.
ಪತ್ನಿ ಕಣ್ಣೆದುರೇ ಘಟನೆ
ಮೃತ ಉಮ್ಮರ್ ಮನೆಯ ಪಕ್ಕದಲ್ಲೇ ಅಪಘಾತ ನಡೆದಿದ್ದು,ಮನೆಯತ್ತ ಸ್ಕೂಟಿ ತಿರುಗಿಸುತ್ತಿದ್ದುದನ್ನು ಉಮ್ಮರ್ ಪತ್ನಿ ಕಂಡಿದ್ದು, ಅದಾಗಲೇ ಯಮನಂತೆ ಬಂದ ಕಾರು ಅಪಘಾತವೆಸಗಿದ್ದು,ಕೂಡಲೇ ಮನೆಯಿಂದ ಓಡೋಡಿ ಬಂದ ಮಗ ಆಸ್ಪತ್ರೆಗೆ ಆಟೋ ಒಂದರಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು ಪ್ರಕರಣ ದಾಖಲಾಗಿದೆ.
