ಮಂಗಳೂರು: ಇಲ್ಲಿನ ಜೆಪ್ಪಿನಮೊಗರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು (ಸೆ.9)ರಂದು ಸರಣಿ ಅಪಘಾತ ನಡೆದಿದ್ದು, ಜನ ನಿಜಕ್ಕೂ ಭಯಭೀತಗೊಂಡಿದ್ದರು. ಈ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಈ ಭೀಕರ ಸರಣಿ ಅಪಘಾತದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ ವೊಂದು ಕಾರಿನ ಮೇಲೇರಿ ಮುಂದೆ ನಿಂತಿದ್ದ ಟ್ರಕ್ನತ್ತ ಮುನ್ನುಗಿತ್ತು. ಇದರ ಪರಿಣಾಮ ಕಾರು ಅಪ್ಪಚ್ಚಿಯಾಗಿ, ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರೆಲ್ಲ ಸೇರಿ ಗಾಯಾಳು ಚಾಲಕನನ್ನು ಹೊರಗೆಳೆದು ಆಸ್ಪತ್ರಗೆ ದಾಖಲು ಮಾಡಿದ್ದಾರೆ.

ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಲಾರಿ ಜಪ್ಪಿನಮೊಗರುವಿನ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಲಾರಿ ಹಿಂದೆ ಚಲಿಸುತ್ತಿದ್ದ ಕಾರು ಬ್ರೇಕ್ ಹಾಕಿದೆ.ಕಾರಿಗೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೇರಳ ಸರಕಾರಿ ಸಾರಿಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಅಪ್ಪಚ್ಚಿಯಾಗಿದೆ.
ಈ ಭೀಕರ ಅಪಘಾತದ ದೃಶ್ಯವು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ.

ಅಪ್ಪಚ್ಚಿಯಾದ ಕಾರಿನಲ್ಲಿ ತಲಪಾಡಿಯವರಾದ, ಮಂಗಳೂರಿನ ಎಂಸಿಎಫ್ ಉದ್ಯೋಗಿ ಚಾಲಕ ದಿನೇಶ್ ಎಂಬುವವರು ಇದ್ದರು. ಕೂಡಲೇ ಸ್ಥಳೀಯರು, ವಾಹನ ಸವಾರರು ಅವರನ್ನು ಹರಸಾಹಸ ಪಟ್ಟು ಹೊರಗೆಳೆದಿದ್ದು, ಆಸ್ಪತ್ರೆಗೆ ಸೇರಿಸಿದ್ದು, ಈ ಅಪಘಾತದ ಎಲ್ಲಾ ದೃಶ್ಯ ಮನೆಯೊಂದರ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಗಂಭೀರಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
