ಪುತ್ತೂರು: ಬ್ರಿಟಿಷ್ ಸರ್ಕಾರದ ಕಾಲ(1869)ದಲ್ಲಿ ನಿರ್ಮಾಣಗೊಂಡು ಸುಮಾರು 152 ವರ್ಷಗಳ ಇತಿಹಾಸವಿರುವ ಪುತ್ತೂರು ನಗರದ ಹೃದಯಭಾಗದ ನೆಲ್ಲಿಕಟ್ಟೆ ಎಂಬಲ್ಲಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಶಿವರಾಮ ಕಾರಂತರ ರಂಗ ಪ್ರಯೋಗಶಾಲೆ, ಹೇರಿಟೇಜ್ ಕಟ್ಟಡ ಇನ್ನು ಬರೀ ನೆನಪು. ಸಾವಿರ ಸಾವಿರ ವರ್ಷಗಳಿಂದಲೂ ತನ್ನ ಪಾಡಿಗೆ ತಾನು ಆ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಪ್ರಥಮ ಗಣೇಶೋತ್ಸವ, ನಾಡಹಬ್ಬಗಳಿಗೂ ಸಾಕ್ಷಿಯಾದ ಕಟ್ಟಡ ಇಂದು ಸಂಪೂರ್ಣ ನೆಲಸಮವಾಗಿದೆ.
ಹೌದು, ಶಿವರಾಮ ಕಾರಂತರ ರಂಗಪ್ರಯೋಗ ಶಾಲೆ ಎಂದೇ ಪರಿಚಿತವಾಗಿದ್ದ ನೆಲ್ಲಿಕಟ್ಟೆಯಲ್ಲಿರುವ ಹೇರಿಟೇಜ್ ಕಟ್ಟಡ ಮೊನ್ನೆಯ ದಿನ ಜೆಸಿಬಿ ಯಂತ್ರದ ಮೂಲಕ ಕೆಡವಲಾಗಿದೆ. ಕೆಲ ದಿನಗಳ ಹಿಂದೆ ಸ್ಥಳೀಯ ಮಕ್ಕಳು ಆಟವಾಡುತ್ತಿರುವಾಗ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು, ಇದರಿಂದ ಮುಂದಕ್ಕೆ ದೊಡ್ಡ ಅನಾಹುತ ಆಗಬಹುದು ಎಂದು ಶಿಕ್ಷಣ ಇಲಾಖೆಯ ವತಿಯಿಂದ ನೆಲಸಮಮಾಡಲಾಗಿದ್ದು ಸದ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪಾರಂಪರಿಕ ಕಟ್ಟಡವನ್ನು ಉಳಿಸುಕೊಳ್ಳುವ ಬದಲಾಗಿ ಕೆಡವಿದ ಬಗ್ಗೆ ಶಾಲಾಭಿವೃದ್ಧಿ ಸಮಿತಿಯು ದುರಸ್ತಿ ಮಾಡುವಾಗಲೇ ಕುಸಿದು ಬಿತ್ತು ಎಂದು ಸಬೂಬು ಹೇಳಿದ್ದು,ಈ ಬಗ್ಗೆ ವಿದ್ಯಾಂಗ ಉಪ ನಿರ್ದೇಶಕರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾಹಿತಿಗೆ ಅದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪುರಾತತ್ವ ಇಲಾಖೆಯ ದುರಸ್ತಿ ಸಂರಕ್ಷಣೆಗಾಗಿ ಯೋಜನೆ ಅನುಷ್ಠಾನಕ್ಕೂ ಮುನ್ನ ನಿಯಮಗಳ ಉಲ್ಲಂಘನೆಯಾಗಿದೆ.
