Sowjanya case: ಸವಣೂರು : 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕು.ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆಯ(Sowjanya case) ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹಿಸಿ ಆ.7ರಂದು ಸವಣೂರಿನಲ್ಲಿ ಸವಣೂರು ಯುವಕ ಮಂಡಲ ಹಾಗೂ ಸಮಾನ ಮನಸ್ಕ ಬಂಧುಗಳ ವತಿಯಿಂದ ಪ್ರತಿಭಟನೆ ನಡೆಯಿತು.

ಸವಣೂರು ಬಸದಿ ಬಳಿಯಿಂದ ಬೆಳಿಗ್ಗೆ10 ರಿಂದ ಮೌನ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಸವಣೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.ಬಳಿಕ ಸವಣೂರು ಗ್ರಾ.ಪಂ.ಬಳಿ ಸೇರಿ ಅಭಿವೃದ್ಧಿ ಅಧಿಕಾರಿಯವರ ಮೂಲಕ ಸರಕಾರಕ್ಕೆ ,ರಾಜ್ಯಪಾಲರಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ, ಅಮಾಯಕ ಹೆಣ್ಣುಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ ಮಾತನಾಡಿ, ಸೌಜನ್ಯಳನ್ನು ಬರ್ಬರವಾಗಿ ಅತ್ಯಾಚಾರ ಮಾಡಿ ಇಡೀ ದೇಹವನ್ನು ಭೀಭತ್ಸವಾಗಿ ಕೊಲೆ ಮಾಡಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು.ಸೌಜನ್ಯ ಪರ ಕಳೆದ 11 ವರ್ಷಗಳಿಂದ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ಕೈಯನ್ನು ನಾವೆಲ್ಲ ಬಲಪಡಿಸಬೇಕು.ಸೌಜನ್ಯ ಪರವಾದ ಹೋರಾಟ ಎಲ್ಲಿ ನಡೆದರೂ ನಾವೆಲ್ಲರೂ ಭಾಗವಹಿಸಿ ಹೋರಾಟಕ್ಕೆ ಇನ್ನಷ್ಟು ಶಕ್ತಿ ನೀಡಬೇಕು ಎಂದರು.
ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ,ನಮ್ಮ ಹೋರಾಟ ಯಾವುದೇ ಕ್ಷೇತ್ರದ ವಿರುದ್ಧ ,ವ್ಯಕ್ತಿಯ ವಿರುದ್ದ ಅಲ್ಲ.ಸೌಜನ್ಯ ಎಂಬ ಹೆಣ್ಣು ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು.ಅಲ್ಲದೆ ಹೋರಾಟದ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಒಡೆದು ಹಾಕುತ್ತೇವೆ ಎನ್ನುವುದನ್ನೂ ನಾವು ಖಂಡಿಸುತ್ತೇವೆ.ಉಡುಪಿಯಲ್ಲಾದ ಘಟನೆಯಲ್ಲೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು.ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು,ಹಾಗಾದರೆ ನೈಜ ಆರೋಪಿಗಳು ಯಾರು ಎಂಬುದು ಪತ್ತೆಯಾಗಬೇಕು.ಸಂತೋಷ್ ರಾವ್ ತನ್ನ ಯೌವನದ ದಿನಗಳನ್ನು ಯಾರೋ ಮಾಡಿದ ತಪ್ಪಿಗೆ ಬಲಿಪಶುವಾಗಿ ಜೈಲಲ್ಲಿ ಬಂಧನದಲ್ಲಿರುವಂತಾಯಿತು.ಆತನಿಗೂ ನ್ಯಾಯ ದೊರಕಬೇಕು.ಸಂತೋಷ್ ರಾವ್ ಅವರ ಮನೆಯವರು 11 ವರ್ಷಗಳ ಕಾಲ ಪಟ್ಟ ಯಾತನೆಗಳೆಷ್ಟೋ ಇದರ ಬಗ್ಗೆಯೂ ನಾವು ಯೋಚಿಸಬೇಕಿದೆ.ಸೌಜನ್ಯ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ನಿವೃತ ಶಿಕ್ಷಕಿ ರೇವತಿ ಕುದ್ಮಾರು, ತಾ.ಪಂ.ಮಾಜಿ ಸದಸ್ಯೆ ವಿಜಯ ಈಶ್ವರ ಗೌಡ, ಮಾತನಾಡಿ, ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು.ಸೌಜನ್ಯಳಿಗಾದ ಅನ್ಯಾಯ ಇಡೀ ಸ್ತ್ರೀ ಸಮುದಾಯಕ್ಕೆ ಆದ ಅನ್ಯಾಯ.ಇನ್ನು ಯಾವುದೇ ಹೆಣ್ಣು ಮಗಳಿಗೆ ಈ ರೀತಿಯ ಅನ್ಯಾಯವಾಗಬಾರದು ಎಂಬ ನಿಟ್ಟಿನಲ್ಲಿ ಈ ಹೋರಾಟ ಇನ್ನಷ್ಟು ಬಲಗೊಳ್ಳಬೇಕು ಎಂದರು.
ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಮಾತನಾಡಿ, ಅಮಾಯಕ ಹೆಣ್ಣು ಮಗುವಿನ ಅತ್ಯಾಚಾರ ಕೊಲೆ ಮಾಡಿದ ನೈಜ ಆರೋಪಿಗಳು ಇನ್ನೂ ಕಾನೂನಿನ ಕೈಗೆ ಸಿಕ್ಕಿಲ್ಲ.ಅನ್ಯಾಯವಾಗಿ ಸೌಜನ್ಯಳನ್ನು ಕೊಂದ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ ಉದನಡ್ಕ,ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ,ತಾ.ಪಂ.ಮಾಜಿ ಉಪಾಧ್ಯಕ್ಷೆ ಲಲಿತಾ ಈಶ್ವರ್, ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಹೊನ್ನಪ್ಪ ಗೌಡ ,ಮಹೇಶ್ ಕೆ.ಸವಣೂರು, ಯತೀಂದ್ರ ಶೆಟ್ಟಿ ಮಠ, ಭರತ್ ರೈ ಸೂಡಿಮುಳ್ಳು ,ಜಯ ಪ್ರಶಾಂತ್ ಪಾಲ್ತಾಡಿ,ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ್ ಇಡ್ಯಾಡಿ ಸೇರಿದಂತೆ ಮಹಿಳೆಯರು ಸೇರಿ 300ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಆ.8 ರಂದು ಸುಳ್ಯದಲ್ಲಿ ನಡೆಯುವ ಬೃಹತ್ ಸಭೆ ಹಾಗೂ ನಿಂತಿಕಲ್ಲಿನಿಂದ ಸುಳ್ಯದವರೆಗೆ ನಡೆಯಲಿರುವ ಬೃಹತ್ ವಾಹನ ರ‌್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಯಿತು.
ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆಗೈದರು.ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ. ಸ್ವಾಗತಿಸಿ,ಕಾರ್ಯದರ್ಶಿ ಕೀರ್ತನ್ ಮೇಲಿನಮುಗ್ಗ ವಂದಿಸಿದರು
