ಭಾರತೀಯ ಚಿತ್ರರಂಗವೇ ಕಣ್ಣೆತ್ತಿ ನೋಡುವಂತೆ ಮಾಡಿದೆ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ‘ಕಾಂತಾರ’ ಚಿತ್ರ. ಎಲ್ಲಾ ಕಡೆ ಈ ಸಿನಿಮಾ ಸದ್ದು ಸಖತ್ ಸೌಂಡ್ ಮಾಡ್ತಾ ಇದೆ. ತುಳುನಾಡಿನ ದೈವಾರಾಧನೆಯನ್ನು ಪ್ರಧಾನವಾಗಿರಿಸಿ ಮಾಡಿದ ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.
‘ಕಾಂತಾರಾ’ ಚಿತ್ರದ ಕತೆ, ಅದ್ಭುತ ಮೇಕಿಂಗ್ ಇದರ ಜೊತೆಗೆ ಸಿನಿಮಾದ ಹಾಡು ಹಾಗೂ ಹಿನ್ನೆಲೆ ಸಂಗೀತ ಕೂಡಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂತಾರ ಸಿನಿಮಾದಲ್ಲಿ ಬಳಕೆಯಾಗಿರುವ ಒಂದು ತುಳು ಹಾಡು ಬಹಳ ಜನರ ಗಮನ ಸೆಳೆಯುತ್ತಿದೆ. ಅಸಲಿಗೆ ಈ ಹಾಡನ್ನು ಹದಿನಾರು ವರ್ಷ ಹಿಂದೆ ಕಲಾವಿದ ಮೈಮ್ ರಾಮ್ ದಾಸ್ ಹಾಡಿದ್ದರು. ದೈವಾರಾಧನೆಗೆ ಸಂಬಂಧಿಸಿದ ವಾ ಪೊರ್ಲುಯಾ (ಏನು ಚಂದವೋ) ಎಂಬ ತುಳು ಹಾಡನ್ನು ಕಾಂತಾರಾ ಚಿತ್ರದಲ್ಲಿ ಬಳಕೆ ಮಾಡಲಾಗಿದೆ.
ತುಳು ಜನಪದೀಯ ಹಾಡುಗಾರ ಮೈಮ್ ರಾಮ್ ದಾಸ್ ಹಾಡಿರುವ ಈ ಹಾಡು ಯಥಾವತ್ತಾಗಿ ಕಾಂತಾರಾ ಚಿತ್ರದಲ್ಲಿ ಬಳಕೆಯಾಗಿದೆ. ಭಂಡಾರದ ಮನೆಯಲ್ಲಿ ದೈವದ ಕೋಲ ಆಗುವ ಸಂಧರ್ಭದಲ್ಲಿ ಈ ಹಾಡನ್ನು ಬಳಸಲಾಗಿದೆ. ಅಂದ ಹಾಗೇ, ಈ ಹಾಡನ್ನು ಹದಿನಾರು ವರ್ಷಗಳ ಹಿಂದ ದೀಪನಲಿಕೆ ಎಂಬ ಆಲ್ಬಮ್ಗಾಗಿ ರಚಿಸಲಾಗಿತ್ತು ಈ ಹಾಡು.
‘ವಾ ಪೊರ್ಲುಯಾ’ ಜನಪದೀಯ ಹಿನ್ನಲೆಯುಳ್ಳ ಹಾಡಾಗಿದೆ. ಈ ಹಾಡು ದೈವಾರಾಧನೆಯನ್ನು, ದೈವವನ್ನು ಖುಷಿಯಿಂದ ಹೊಗಳಿ ಗೌರವಿಸುವ ಹಾಡಾಗಿದ್ದು, ಈ ಹಾಡಿಗೆ ಕಾಪಿರೈಟ್ ಇಲ್ಲ. ಶಶಿ ರಾಜ್ ಕಾವೂರು ಅವರ ಸಾಹಿತ್ಯವಿರುವ ಈ ಹಾಡು ಹದಿನಾರು ವರ್ಷ ಆದರೂ ಹಳೆಯದಾಗಿಲ್ಲ. ನನ್ನ ಗುರು ಭಾಸ್ಕರ್ ನೆಲ್ಲಿತೀರ್ಥ ಹೇಳಿದಂತೆ ವಾ ಪೊರ್ಲುಯಾ ಹಾಡು ಶತಮಾನದ ಹಾಡಾಗಿದೆ. ಕನ್ನಡ ಚಿತ್ರದಲ್ಲಿ ತುಳು ಹಾಡು ಬಳಕೆಯಾಗಿರೋದು ಖುಷಿ ತಂದಿದೆ ಅಂತಾ ಮೈಮ್ ರಾಮ್ ದಾಸ್ ಹೇಳಿದ್ದಾರೆ.
ಲಾಕ್ ಡೌನ್ ಸಂಧರ್ಭದಲ್ಲಿ ರಿಷಬ್ ಶೆಟ್ಟಿ ‘ಕಾಂತಾರಾ’ದ ಕಥೆ ಹೇಳಿ, ಈ ಚಿತ್ರಕ್ಕೆ ಜನಪದೀಯ ಸಂಗೀತದ ಕುರಿತು ಕೇಳಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕೇಶ್ ಮುಂದೆ ಹಲವು ತುಳು ಹಾಡು, ಪಾಡ್ದನ, ಉರಲ್ ಹಾಡುಗಳನ್ನು ಹಾಡಿದೆ. ಆಗ ವಾ ಪೊರ್ಲುಯಾ ಈ ಗೀತೆ ಹಾಡಿದಾಗ ಅಜನೀಶ್ ಅವರಿಗೆ ಇಷ್ಟ ಆಯಿತು. ಅನಂತರ ಚಿತ್ರದಲ್ಲಿ ಬಳಸಿದರು ಎಂದು ಮೈಮ್ ರಾಮ್ ದಾಸ್ ಹೇಳಿದ್ದಾರೆ.
