Sullia :ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನೋರ್ವ ಕಾರಿನಲ್ಲಿ ಸುತ್ತಾಟ ನಡೆಸಿದ್ದಾನೆ ಎಂದು ಹಿಂದೂ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಸುಳ್ಯ (Sullia) ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದಿದ್ದು, ವಿಷಯ ಸುದ್ದಿಯಾಗುತ್ತಲೇ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಗ್ಗೆ ವರದಿಯಾಗಿದೆ.
ಕೇರಳ ಮೂಲದ ಯುವಕನೋರ್ವ ಸುಳ್ಯದ ಅರಂತೋಡು ಎಂಬಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡಿದ್ದು, ನಿನ್ನೆ ಕೇರಳ ಮೂಲದ ಹಿಂದೂ ಯುವತಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಸುತ್ತಾಟ ನಡೆಸಿರುವುದು ಹಿಂದೂ ಯುವಕರ ಕೆಂಗಣ್ಣಿಗೆ ಗುರಿಯಾಗಿತ್ತು. ಮಧ್ಯಾಹ್ನದ ಬಳಿಕ ಆಕೆಯನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಹಿಂದಿರುಗುತ್ತಿದ್ದ ಯುವಕನನ್ನು ಹಿಂದೂ ಯುವಕರ ತಂಡವೊಂದು ತಡೆದು ಹಲ್ಲೆ ನಡೆಸಿದ್ದು, ಗಾಯಗೊಂಡ ಯುವಕ ಪೊಲೀಸರಿಗೆ ದೂರು ನೀಡಿದ್ದ.
ಯುವಕನ ದೂರಿನ ಆಧಾರದಲ್ಲಿ ಪೊಲೀಸರು ಕೆಲ ಹಿಂದೂ ಯುವಕರನ್ನು ವಶಕ್ಕೆ ಪಡೆದ ಬೆನ್ನಲ್ಲೇ ವಿಚಾರ ಸ್ಥಳೀಯ ನಾಯಕರ ಕಿವಿಗೆ ಬಿದ್ದಿತ್ತು. ಆದರೆ ಬಂಧನಕ್ಕೊಳಗಾದ ಯುವಕರನ್ನು ಬಿಡಿಸುವ ಬಗ್ಗೆ ಯಾರೊಬ್ಬರೂ ದನಿ ಎತ್ತದೇ ಇದ್ದಾಗ ಯುವಕರ ತಂಡ ಅರುಣ್ ಕುಮಾರ್ ಪುತ್ತಿಲರಿಗೆ ವಿಷಯ ತಿಳಿಸಿತ್ತು ಎನ್ನಲಾಗಿದೆ.ಕೂಡಲೇ ಪುತ್ತೂರಿನಿಂದ ಸುಳ್ಯಕ್ಕೆ ಬಂದ ಪುತ್ತಿಲ ಠಾಣೆಗೆ ತೆರಳಿದ್ದು, ಈ ವೇಳೆ ಬಲಿಷ್ಠ ರಾಜಕೀಯ ಪಕ್ಷದ ಪ್ರಮುಖರು ಠಾಣೆಯ ಹೊರಗಡೆಯೇ ನಿಂತಿದ್ದರು ಎನ್ನುವ ಮಾಹಿತಿಯೂ ಹರಿದಾಡಿದೆ.
ಬಳಿಕ ಅರುಣ್ ಕುಮಾರ್ ಪುತ್ತಿಲ ಠಾಣೆಯಲ್ಲಿ ಮಾತುಕತೆ ನಡೆಸುವ ಮೂಲಕ ಬಂಧನಕ್ಕೊಳಗಾದ ಯುವಕರನ್ನು ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಚಾರ ಸುಳ್ಯದಲ್ಲಿ ಹೆಚ್ಚು ಸದ್ದು ಮಾಡಿದ್ದು, ಸ್ಥಳೀಯ ನಾಯಕರ ವರ್ತನೆಗೆ ಧಿಕ್ಕಾರದೊಂದಿಗೆ, ಪುತ್ತಿಲರಿಗೆ ಸುಳ್ಯದ ಯುವಕರ ಜೈ ಹಾಕಿದೆ.
ಇದನ್ನೂ ಓದಿ: ಎಐಐಎಂಎಸ್ ನರ್ಸಿಂಗ್ ಪರೀಕ್ಷೆಗೆ ಅರ್ಜಿ ಆಹ್ವಾನ
