High Court: ಆಕೆ ಪ್ರಸಿದ್ಧ ವೈದ್ಯೆ. ಕೌಟುಂಬಿಕ ಕಾರಣಗಳಿಂದ ತನ್ನ ಗಂಡನಿಂದ ಬೇರ್ಪಟ್ಟು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಎಂಟು ವರ್ಷದ ಮಗಳಿದ್ದಾರೆ. ತನ್ನ ಮಗಳು ತನ್ನ ಜೊತೆ ಇರಬೇಕೆಂದು ಗಂಡ ಡಿವೋರ್ಸ್ ಸಂದರ್ಭದಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಈ ಸಂದರ್ಭದಲ್ಲಿ ಈ ಮನವಿಯನ್ನು ಆಧರಿಸಿ ಮಗಳನ್ನು ತಾತ್ಕಾಲಿಕವಾಗಿ ತಂದೆಯ ಸುಪರ್ದಿಗೆ ನೀಡಲು ಕಳೆದ ಜುಲೈನಲ್ಲಿ ಆದೇಶ ನೀಡಿತ್ತು. ಆದರೆ ಡಾಕ್ಟರ್ ಮಹಿಳೆ ಈ ಆದೇಶ ಪಾಲಿಸಿಲ್ಲ. ಕೊನೆಗೆ ದಿಕ್ಕುತೋಚದ ಗಂಡ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಹೈಕೋರ್ಟ್ (High Court)ಗರಂ ಆಗಿದ್ದು, ಪ್ರಾಯಶ್ಚಿತ್ತದ ಶಿಕ್ಷೆಯನ್ನು ಕೊಟ್ಟಿದೆ.
ಇದನ್ನು ಗಮನಿಸಿದ ಕೋರ್ಟ್ ಆಕೆಯ ಮೇಲೆ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕೇಸು ದಾಖಲಿಸಿಕೊಂಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ವೈದ್ಯೆಗೆ ಪ್ರಶ್ನೆ ಮಾಡಿದ್ದು, ಬೇಷರತ್ ಕ್ಷಮಾಪಣೆಯನ್ನು ಕೇಳಿದ ಮಹಿಳಾ ವೈದ್ಯೆ, ಕೋರ್ಟ್ ನೀಡುವ ಯಾವುದೇ ಶಿಕ್ಷೆಗೂ ನಾನು ಸಿದ್ಧ ಎಂದು ಹೇಳಿದರು.
ಅನಂತರ ಕೋರ್ಟ್ ಮಹಿಳಾ ವೈದ್ಯೆಯ ಪ್ರಾಯಶ್ಚಿತದ ಭಾವ ನೋಡಿ, ಮಗಳನ್ನು ತಂದೆಯ ಸುಪರ್ದಿಗೆ ನೀಡುವಂತೆ ಮುಚ್ಚಳಿಕೆ ಬರೆದುಕೊಡಲು ಸೂಚಿಸಿತು. ಇಷ್ಟು ಮಾತ್ರವಲ್ಲದೇ ಆರು ತಿಂಗಳ ನಂತರ ತನ್ನ ಮುಚ್ಚಳಿಕೆಯನ್ನು ಪಾಲನೆ ಮಾಡಿದ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ನೀಡಬೇಕು ಎಂದು ನ್ಯಾಯಾಲಯ ವೈದ್ಯೆಗೆ ನಿರ್ದೇಶನ ಮಾಡಿದೆ.
ತಿಂಗಳಲ್ಲಿ ಒಂದು ದಿನ, ಆರು ತಿಂಗಳ ಕಾಲ, ಬೆಂಗಳೂರಿನ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆಯನ್ನು ಒಂದು ದಿನ ಪೂರ್ತಿ ಮಾಡಬೇಕು. ಯಾವ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡಬೇಕೆಂದಿರುವಿರೋ ಆ ಸರಕಾರಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಪೂರ್ವಾನುಮತಿ ಪಡೆದು, ಇಂಥ ದಿನ ಬರುವುದಾಗಿ ಹೇಳಿ ಅನಂತರ ಹೋಗಿ ಸೇವೆ ಮಾಡಿ ಬರಬೇಕು ಎಂದು ಪ್ರಾಯಶ್ಚಿತ ಶಿಕ್ಷೆಯನ್ನು ನ್ಯಾಯಾಂಗ ನೀಡಿತು. ನಂತರ ವೈದ್ಯೆ ಬೇಷರತ್ ಕ್ಷಮಾಪಣೆ ಪತ್ರ ನೀಡಿದ ಬಳಿಕ, ಅದಕ್ಕೆ ಒಪ್ಪಿದ ನ್ಯಾಯಾಲಯ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ರದ್ದು ಪಡಿಸಿತು.
ಹಾಗೆನೇ, ಮಹಿಳಾ ವೈದ್ಯೆ ಯಾವ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮನವಿ ಮಾಡಿದರೆ ಆ ಮನವಿಯನ್ನು ಆ ಆಸ್ಪತ್ರೆಯ ಆಡಳಿತ ಮಂಡಳಿ ಪರಿಗಣಿಸಬೇಕು. ಆಕೆಗೆ ಸಮುದಾಯ ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೂಡಾ ಕೋರ್ಟ್ ಹೇಳಿದೆ.
