Bengaluru : ಪ್ರಿಯಕರ ಮದುವೆಯಾಗಲು ನಿರಾಕರಿಸಿದನೆಂದು ಮಹಿಳೆಯು ಆತನ ಮುಖಕ್ಕೆ ಬಿಸಿ ನೀರು ಎರಚಿ, ಬಿಯರ್ ಬಾಟಲ್’ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ ಮೇ 25 ರಂದು ರಾತ್ರಿ ವೇಳೆ ನಡೆದಿದೆ.
ಕಲಬುರಗಿ ಮೂಲದ ವಿಜಯಶಂಕರ ಆರ್ಯ ಎಂಬವರಿಗೆ
ಜ್ಯೋತಿ ದೊಡ್ಡಮನಿ ಎಂಬಾಕೆ ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ಈಕೆ ಕಲಬುರಗಿಯ ಅಫಜಲಪುರ ಮೂಲದವಳು ಎನ್ನಲಾಗಿದೆ. ಇವರಿಬ್ಬರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದ್ದು, ಇದೀಗ ವಿಜಯಶಂಕರ ಮದುವೆಯಾಗಲು ಹಿಂದೇಟು ಹಾಕಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನನ್ನು ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ್ದಾಳೆ. ಅಲ್ಲದೆ, ಆತನ ಮೇಲೆ
ಬಿಯರ್ ಬಾಟಲ್’ನಿಂದ ಹಲ್ಲೆ ನಡೆಸಿದ್ದಾಳೆ. ಘಟನೆ ಪರಿಣಾಮ ವಿಜಯಶಂಕರ ಗಂಭೀರ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯ್ ಚಾಮರಾಜಪೇಟೆಯ ಬೋರೋ ಕ್ಲಾಥಿಂಗ್ನಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ. ಈತನಿಗೆ ವಿವಾಹವಾಗಿತ್ತು. ಆದರೂ ಜ್ಯೋತಿ ಎಂಬಾಕೆಯೊಂದಿಗೆ ಸಂಪರ್ಕ ಹೊಂದಿದ್ದರು. ಜ್ಯೋತಿ ಬೃಂದಾವನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಇಬ್ಬರಿಗೂ ಪರಿಚಯವಾಗಿ ಸುಮಾರು 4 ವರ್ಷಗಳೇ ಕಳೆದಿತ್ತು. ಇತ್ತ ಜ್ಯೋತಿಗೂ ವಿವಾಹವಾಗಿತ್ತು. ಈ ವಿಚಾರವನ್ನು ಆಕೆ ವಿಜಯ್’ನಿಂದ ಮುಚ್ಚಿಟ್ಟಿದ್ದಳು. ಎಷ್ಟೇ ಆದರೂ ಸತ್ಯ ಒಂದಲ್ಲ ಒಂದು ದಿನ ಹೊರ ಬರುತ್ತದೆ ಎನ್ನುವ ಹಾಗೆ ಇಲ್ಲಿಯೂ ಆಕೆ ಮುಚ್ಚಿಟ್ಟ ಮದುವೆ ಗುಟ್ಟು ವಿಜಯ್ ತಿಳಿಯಿತು.
ನಂತರ ಜ್ಯೋತಿಯನ್ನು ದೂರ ಮಾಡಲು ಶುರು ಮಾಡಿದ್ದಾನೆ. ನಮ್ಮಬ್ಬರಿಗೂ ಇಬ್ಬರಿಗೂ ಮದುವೆಯಾಗಿದೆ. ಇದೆಲ್ಲಾ ಬೇಡ. ಇಲ್ಲಿಗೆ ನಿಲ್ಲಿಸೋಣ ಎಂದು ವಿಜಯ್, ಜ್ಯೋತಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ ಮನೆಗೆ ಬಾ ಮಾತನಾಡಬೇಕು ಎಂದು ಹೇಳಿ ಆತನನ್ನು ಕರೆಸಿಕೊಂಡಿದ್ದಾಳೆ. ಮನೆಗೆ ಬಂದ ಮೇಲೆ ಆತನ ಮುಖಕ್ಕೆ
ಬಿಸಿ ನೀರು ಎರಚಿ, ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಹಲ್ಲೆ ಮಾಡಿ, ಮನೆ ಲಾಕ್ ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಇತ್ತ ವಿಜಯ್ ನೋವಿನಿಂದ ಚೀರಾಡಿದ್ದಾನೆ. ಆತನ ಕೂಗು ಕೇಳಿ ಮನೆ ಮಾಲೀಕ ಸೈಯದ್ ಓಡಿ ಹೋಗಿ ನೋಡುವಾಗ, ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಆತನನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ವಿಜಯ್, ಜ್ಯೋತಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಎಫ್ಐಆರ್ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.
