Home » 200 ಕೋಟಿ ವೆಚ್ಚದಲ್ಲಿ 100 ಠಾಣೆಗಳಿಗೆ ಹೊಸಕಟ್ಟಡ – ಗೃಹಸಚಿವ ಆರಗ ಜ್ಞಾನೇಂದ್ರ

200 ಕೋಟಿ ವೆಚ್ಚದಲ್ಲಿ 100 ಠಾಣೆಗಳಿಗೆ ಹೊಸಕಟ್ಟಡ – ಗೃಹಸಚಿವ ಆರಗ ಜ್ಞಾನೇಂದ್ರ

by Praveen Chennavara
0 comments

ಕಡಬ : ಪೊಲೀಸ್‌ ಇಲಾಖೆಯ ಬಲವರ್ಧನೆಗೆ ರಾಜ್ಯ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಸುಮಾರು 100 ಠಾಣೆಗಳಿಗೆ 200 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಸುಬ್ರಹ್ಮಣ್ಯ ಠಾಣೆಗೂ 1 ಕೋಟಿ ರೂ. ಅನುದಾನ ಇಡಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ಸೋಮವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.”ಪೊಲೀಸರಿಗೆ ಗೃಹ 20-25′ ಯೋಜನೆಯಲ್ಲಿ 2025ರ ಹೊತ್ತಿಗೆ 10 ಸಾವಿರ ಮನೆ ನಿರ್ಮಾಣ ವಾಗಲಿದ್ದು, ವಸತಿ ಸಮಸ್ಯೆ ನಿವಾರಣೆಯಾಗಲಿದೆ. ಇಲಾಖೆಯಲ್ಲಿ ವಾರ್ಷಿಕ 4 ಸಾವಿರ ನೇಮಕಾತಿ ನಡೆಸಲಾಗುತ್ತಿದೆ. ಈಗ ಕೇವಲ 12 ಸಾವಿರ ಹುದ್ದೆಗಳು ಖಾಲಿ ಇವೆ ಎಂದರು.

ಗೋಹತ್ಯೆ ನಿಷೇಧ ಕಾಯಿದೆ ಈಗಾಗಲೇ ಜಾರಿಯಲ್ಲಿದ್ದು, ಹೊಸ ಕಾಯಿದೆಯಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರೂ ಸಹಕರಿಸಬೇಕು. ಉಪ್ಪಿನಂಗಡಿಯ ಇಳಂತಿಲದಲ್ಲಿ ಪತ್ತೆಯಾದ ಗ್ರೆನೇಡ್‌ ಪ್ರಕರಣದ ತನಿಖೆ ಎಲ್ಲ ರೀತಿಯಲ್ಲೂ ನಡೆಯುತ್ತಿದೆ ಎಂದರು.
ಈ ಮೊದಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಶ್ರೀ ಭೇಟಿ
ಅರಗ ಜ್ಞಾನೇಂದ್ರ ಅವರು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಶ್ರೀಗಳು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು.

You may also like

Leave a Comment