Dakshina Kannada: ಪ್ರಕೃತಿಯ ನಡುವೆ ಅದೆಷ್ಟೋ ಅನೇಕ ವಿಚಿತ್ರವಾದ, ವಿಶಿಷ್ಟವಾದ ನಿಗೂಢಗಳ ಅಡಗಿವೆ. ಈ ಕೌತುಕಗಳಲ್ಲಿ ಕೆಲವು ಬೆಳಕಿಗೆ ಬಂದರೆ ಮತ್ತೆ ಕೆಲವು ಹಾಗೆ ಅಡಕವಾಗಿರುತ್ತವೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ ವಿಚಾರ ಕೂಡ ಇದುವೇ ಆಗಿದೆ. ಅದೂ ಕೂಡ ಕಾಡಿನ ನಡುವೆ ಆಡಗಿರುವ ಒಂದು ವಿಶೇಷವಾದ ಬಾವಿಯ, ವಿಶಿಷ್ಟವಾದ ವಿಶೇಷತೆಯ ಬಗ್ಗೆ.
ಹೌದು, ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಸುಳ್ಯದ(Sullia) ಅರಣ್ಯ ಪ್ರದೇಶದೊಳಗೆ ನೂರಾರು ಎಕ್ರೆ ಪ್ರದೇಶಗಳಿಂದ ಹರಿದು ಬರುವ ನೀರು ಒಂದೆಡೆ ಸೇರುತ್ತಿದ್ದು, ನೀರು ಸೇರುವ ಜಾಗ ಮಾತ್ರ ವಿಸ್ಮಯವಾಗಿದೆ. ಈ ನೀರು ಸೇರುವ ಜಾಗ ಮತ್ತು ಈ ನೀರು ಯಾವ ಕಡೆಗೆ ಹೋಗುತ್ತಿದೆ ಎಂಬುದು ಮಾತ್ರ ವಿಸ್ಮಯವಾಗಿದೆ.
ಹೇಗಿದೆ ಬಾವಿ?
ಅರಣ್ಯ ಪ್ರದೇಶದ ಒಳಗೆ ಈ ಪುರಾತನ ರೀತಿಯ ಬಾವಿ ಕಾಣಬಹುದಾಗಿದೆ. ಅರಣ್ಯ ಪ್ರದೇಶದ ಎತ್ತರದ ಪ್ರದೇಶದಿಂದ ನೀರು ಹರಿದು ಬಂದು ಈ ಬಾವಿಗೆ ಸೇರುತ್ತಿದೆ. ಈ ಬಾವಿ ವೃತ್ತಾಕಾರದಲ್ಲಿದ್ದು, ಬಂಡೆ ಕಲ್ಲು, ಮುರ ಕಲ್ಲಿನಿಂದ ಕೆತ್ತಿ ನಿರ್ಮಿಸಿದಂತೆ ಕಂಡುಬರುತ್ತಿದೆ. 20-25 ಅಡಿ ಆಳವನ್ನು ಈ ಬಾವಿ ಹೊಂದಿದೆ. ಬಾವಿಯ ಅಡಿ ಭಾಗದಲ್ಲಿ ಸೆಳೆಯಂತಿದ್ದು, ಇದೇ ಸೆಳೆಯಿಂದ ನೀರು ಹರಿದು ಹೊರಕ್ಕೆ ಹೋಗುತ್ತದೆ.
ವಿಶೇಷ ಎಂದರೆ ಮಳೆಗಾಗಲದಲ್ಲಿ ನಿರಂತರ ನೀರು ಹರಿದು ಬಂದು ಸೇರುತ್ತಿದ್ದರೂ, ಈ ಬಾವಿ ತುಂಬುತ್ತಿಲ್ಲ, ಬಾವಿಯೊಳಗಿನಿಂದ ನೀರು ಬೇರೆಡೆಗೆ ಹರಿದು ಸಾಗುತ್ತಿದ್ದು, ಎಲ್ಲಿಗೆ ಸೇರುತ್ತದೆ ಎಂಬ ಸ್ಪಷ್ಟ ಮಾಹಿತಿ ಯಾರಲ್ಲೂ ಇಲ್ಲದಿದ್ದರೂ ಬಾವಿಗೆ ಸೇರುವ ನೀರು ತುದಿಯಡ್ಕ ಬೈಲು ಎಂಬಲ್ಲಿಗೆ ಸೇರುತ್ತದೆ ಎಂದು ಕೆಲವರು ತಿಳಿಸಿದರೆ, ಪಯಸ್ವಿನಿ ನದಿಗೆ ಸೇರುತ್ತದೆ ಎಂದು ಇನ್ನು ಕೆಲವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆದರೆ ಸ್ಪಷ್ಟತೆ ಇಲ್ಲ. ಬೇಸಗೆಯಲ್ಲಿ ಈ ಬಾವಿ ಹಾಗೂ ಸುತ್ತ ಮುತ್ತಲ ಪ್ರದೇಶ ನೀರು ಇಲ್ಲದೆ ಬರಡಾಗಿರುತ್ತದೆ.
ಇದೇ ಪರಿಸರದಲ್ಲಿ ವಿಶಾಲವಾದ ಮೈದಾನದಂತಿರುವ ಜಾಗವಿದ್ದು ನಿಖರವಾಗಿ ತಿಳಿದುಬಾರದಿದ್ದರೂ ಒಂದು ರೀತಿಯ ವಿವಿಧ ಆಕೃತಿಗಳು ಗೋಚರಿಸುತ್ತಿವೆ. ಹಸು-ಕರು, ಆನೆ, ರೇಖೆಗಳು, ಚೆನ್ನೆಮಣೆಯಂತೆ ಕಾಣುತ್ತವೆ ಎಂಬುದು ಸ್ಥಳೀಯರ ಅಭಿಪ್ರಾಯ. ಒಟ್ಟಿನಲ್ಲಿ ಮೆದಿನಡ್ಕ ಪ್ರದೇಶದ ಈ ವಿಸ್ಮಯ ಬಾವಿ, ವಿಸ್ಮಯ ವಿಶಾಲ ಮೈದಾನವು ಕುತೂಹಲದಂತಿದ್ದು, ಜತೆಗೆ ಈ ಭಾಗದಲ್ಲೇ ಇನ್ನೂ ಎರಡು ಈ ರೀತಿಯ ಬಾವಿಗಳಿವೆ ಎನ್ನಲಾಗಿದೆ.
