ಶಿವಮೊಗ್ಗ ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಐದು ಮಂದಿ ಆರೋಪಿಗಳು, ರಾಷ್ಟ್ರೀಯ ತನಿಖಾ ದಳ(ಎ ನ್‌ಐಎ)ದ ಅಧಿಕಾರಿಗಳ ಜತೆ ರಂಜಾನ್ ಮುಗಿಯುವ ತನಕ ಅವರ ಜೊತೆ ಹೋಗುವುದಿಲ್ಲ ಎಂದು ಹೈಡ್ರಾಮಾ ಸೃಷ್ಟಿಸಿದಲ್ಲದೆ, ಜೈಲಿನ ಗೋಡೆಗೆ ತಲೆ ಜಜ್ಜಿಕೊಂಡು ರಂಪಾಟ ಮಾಡಿರುವ ಘಟನೆ ನಡೆದಿದೆ.
ಆದರೂ ಎನ್‌ಐಎ ಅಧಿಕಾರಿಗಳು ಆರೋಪಿಗಳಾದ ರಿಹಾನ್ ಶರೀಫ್, ಮೊಹಮದ್ ಖ್ಯಾಸಿಫ್, ಅಸೀಫ್ ಉಲ್ಲಾ ಖಾನ್, ಸೈಯ್ಯದ್ ಫಾರೂಕ್ ಮತ್ತು ರೋಷನ್ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ವಶಕ್ಕೆ ನೀಡುವಂತೆ ಎನ್ ಐಎ ಅಧಿಕಾರಿಗಳು ಹೋದಾಗ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆಯಲು ಹೋದಾಗ, ಅವರೊಂದಿಗೆ ಹೋಗುವುದಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೇ, ರಂಜಾನ್ ಉಪವಾಸ ಮುಗಿಯುವರೆಗೂ ಎನ್‌ಐಎ ವಶಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಗೋಡೆ ಮತ್ತು ಕಿಟಕಿಗೆ ತಲೆ ಚಚ್ಚಿಕೊಂಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಜೈಲಿನ ಸಿಬ್ಬಂದಿಗಳು ಎಲ್ಲರನ್ನು ತಡೆದರು. ಆಗ ಜೈಲಿನ ಅಧಿಕಾರಿಗಳು, ಆರೋಪಿಗಳ ಪರವಾಗಿ ಮಾತನಾಡಿದ್ದಾರೆ. ಇದರಿಂದ ಬೇಸರಗೊಂಡ ಎನ್‌ಐಎ ಅಧಿಕಾರಿಗಳು, ಇದು ನ್ಯಾಯಾಲಯ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ತಪ್ಪಾದರೆ ನೀವು ಹೊಣೆ ಎಂದು ಲಿಖೀತ ರೂಪದಲ್ಲಿ ಬರೆದುಕೊಂಡುವಂತೆ ಕೋರಿದಾಗ, ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಲಾಗಿದೆ.
