ಮನೆಯಲ್ಲಿದ್ದ ವ್ಯಕ್ತಿಯನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾತ ಆತನನ್ನು ತನ್ನ ನಾಡಕೋವಿಯಿಂದ ಗುಂಡು ಹಾರಿಸಿ ಕೊಂದು, ಚಾರ್ಮಾಡಿ ಘಾಟ್ ನ ಕಾಡಿನ ಮಧ್ಯೆ ಹೂತು ಹಾಕಿರುವ ಘಟನೆ ನಡೆದಿದೆ.
46 ವರ್ಷದ ನಾಗೇಶ್ ಆಚಾರ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಘಟನೆಯ ವಿವರ : ಕೊಟ್ಟಿಗೆಹಾರ ಸಮೀಪದ ಬಾಳೂರಿನಿಂದ 46 ವರ್ಷದ ನಾಗೇಶ್ ಆಚಾರ್ ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬಿದಿರುತಳ ಗ್ರಾಮದ ಕೃಷ್ಣೇಗೌಡ ಎಂಬಾತ ನಾಗೇಶ್ ರನ್ನು ಮನೆಗೆ ಬಂದು ಜೀಪ್ನಲ್ಲಿ ಕರೆದುಕೊಂಡು ಹೋಗಿದ್ದರು. ಒಂದೆರಡು ದಿನ ಕಳೆದ್ರೂ ನಾಗೇಶ್ ತನ್ನ ಮನೆಗೆ ವಾಪಸ್ ಆಗಲೇ ಇಲ್ಲ.

ಈ ಬಗ್ಗೆ ನಾಗೇಶ್ ಮನೆಯವರು ಕೃಷ್ಣೇಗೌಡನ ಬಳಿ ಕೇಳಿದ್ರೆ ಅವರು ಎಲ್ಲಿ ಹೋದ್ರೋ ನನಗೆ ಗೊತ್ತೆ ಇಲ್ಲ ಅಂತಾ ನಾಟಕ ಮಾಡಿದ್ದ. ಅನುಮಾನಗೊಂಡು ಚಾರ್ಮಾಡಿ ಘಾಟ್ ನ ಹಲವೆಡೆ ನೂರಾರು ಜನರು ಸೋಮವಾರ-ಮಂಗಳವಾರ ಹುಡುಕಾಟ ನಡೆಸಿದ್ರು. ವಿಪರ್ಯಾಸವೆಂದ್ರೆ ಈ ಹುಡುಕಾಟದಲ್ಲಿ ಆರೋಪಿ ಕೃಷ್ಣೇಗೌಡ ಕೂಡ ಭಾಗಿಯಾಗಿದ್ದ.
ನಿನ್ನೆ ಸಂಜೆ ಸ್ಥಳೀಯರೊಬ್ಬರು ಹುಡುಕಾಟ ನಡೆಸುವಾಗ ವಾಸನೆ ಬಂದಿದೆ. ಅದೇ ಮಾರ್ಗದಲ್ಲಿ ಹುಡುಕಿಕೊಂಡು ಹೋದಾಗ ನಾಗೇಶ್ ಆಚಾರ್ ಮೃತದೇಹವಿರೋದು ಕನ್ಫರ್ಮ್ ಆಗಿದೆ. ನಿನ್ನೆ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ನಾಗರಾಜ್ ಸಮಕ್ಷಮದಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಶವವನ್ನ ಹೊರತೆಗೆಯಲಾಯ್ತು. ಪ್ರಪಾತದಲ್ಲಿ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆ ಎತ್ತಿಕೊಂಡು ಬಂದಾಗ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.

ಆರೋಪಿ ಕೃಷ್ಣೇಗೌಡ ಮೂಲತಃ ಬಿದಿರುತಳ ಗ್ರಾಮದವನು, ಸದ್ಯ ಬಾಳೂರಿನಲ್ಲಿ ವಾಸವಿದ್ದಾನೆ. ಆದ್ರೆ ಪ್ರಕೃತಿಯ ಸೌಂದರ್ಯವನ್ನೇ ಹೊದ್ದು ಮಲಗಿರೋ ಬಿದಿರುತಳದಲ್ಲಿ ಹೊಂ ಸ್ಟೇ ಒಂದನ್ನು ನಿರ್ಮಾಣ ಮಾಡುತ್ತಿದ್ದ. ಇದಕ್ಕಾಗಿ ಬಾಳೂರು ಸಂರಕ್ಷಿತ ಅರಣ್ಯದಲ್ಲಿ ಎರಡು ತಿಂಗಳ ಹಿಂದೆ ಸುಮಾರು 100 ಮರಗಳ ಹನನ ಕೂಡ ಮಾಡಿದ್ದ. ಇಷ್ಟಾದ್ರೂ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಯಾರೂ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ.
ಕಡಿದ ಮರಗಳನ್ನು ಹದಗೊಳಿಸುವ ಕೆಲಸಕ್ಕೆ ನಾಗೇಶ್ ಆಚಾರ್ನನ್ನ ಬಿದಿರುತಳ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅಕ್ರಮವಾಗಿ ಕಡಿದ ಮರಗಳನ್ನು ಹದಗೊಳಿಸುವ ಕೆಲಸ ಮಾಡಲ್ಲ ಅಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ನಾಗೇಶ್ ರಿಂದ ಹಣ ಪಡೆದಿದ್ದು, ಅದನ್ನು ಹಿಂದಿರುಗಿಸುವಂತೆ ಕೃಷ್ಣೇಗೌಡನ ಬಳಿ ನಾಗೇಶ್ ಕೇಳುತ್ತಿದ್ದ. ಈ ಎಲ್ಲದ್ದರಿಂದ ಕೋಪಗೊಂಡು ನಾಡ ಬಂದೂಕಿನಲ್ಲಿ ಗುಂಡಿಟ್ಟು ಹತ್ಯೆ ಮಾಡಿ ಕಾಡಿನಲ್ಲಿ ಶವವನ್ನ ಮುಚ್ಚಿಟ್ಟು ನಾಟಕ ಮಾಡಿದ್ದ.
ಮನೆಯಲ್ಲಿದ್ದವನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ನಾಟಕ ಮಾಡಿದ ಕೃಷ್ಣೇಗೌಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೆಣ ಸಾಗಿಸಲು ಸಹಕಾರ ನೀಡಿದ ಮತ್ತಿಬ್ಬರು ಆರೋಪಿಗಳನ್ನು ಕೂಡ ಬಾಳೂರು ಪೊಲೀಸರು ಬಂಧಿಸಿದ್ದಾರೆ.
