ATM Robbery Mangalore: ಮಂಗಳೂರು (Mangalore)ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ಲೂಟಿ (ATM Robbery Mangalore)ಮಾಡುವ ಪ್ರಯತ್ನ ಮಾಡಿದ ಪ್ರಕರಣ ಭೇದಿಸಿದ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಆರೋಪಿಗಳು ಈ ಹಿಂದೆ 2023ರ ಜುಲೈ 26ರಂದು ಮಧ್ಯರಾತ್ರಿ ಶಿವಮೊಗ್ಗ ಜಿಲ್ಲೆಯ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವ ದೇವಸ್ಥಾನದ ಬಳಿಯಿರುವ ಬ್ಯಾಂಕ್ ಎಟಿಎಂ (ATM )ಕೇಂದ್ರವನ್ನು ಜೆಸಿಬಿ ಮೂಲಕ ಒಡೆಯುವ ಪ್ರಯತ್ನ ನಡೆಸಿದ್ದರು. ಆಗಸ್ಟ್ 4ರಂದು ರಾತ್ರಿ ಪಡುಬಿದ್ರೆ ಠಾಣೆಯ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ಯಂತ್ರವನ್ನು ಕದ್ದು, ಅದೇ ಜೆಸಿಬಿ( JCB)ಮುಖಾಂತರ ಸುರತ್ಕಲ್ ವರೆಗೆ ಚಾಲನೆ ಮಾಡಿಕೊಂಡು ಬಂದಿದ್ದ ಆರೋಪಿಗಳು ಇಡ್ಯಾ ಗ್ರಾಮದ ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಮೀಪದ ರಾಜಶ್ರೀ ಕಟ್ಟಡದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕಿನ ಎಟಿಎಂ ಮೆಷಿನನ್ನು ಮುಂಜಾನೆ ನಸುಕಿನ ವೇಳೆ 2ರಿಂದ 2.30ರ ನಡುವೆ ಒಡೆಯಲು ಸಂಚು ರೂಪಿಸಿ ಕಾರ್ಯೋನ್ಮುಖರಾಗಿದ್ದರು. ಆದರೆ, ಎಟಿಎಂ ಕೇಂದ್ರದಲ್ಲಿ ಸೈರನ್ ಆದ ಹಿನ್ನೆಲೆ ಹಿಡಿದ ಕೆಲಸಕ್ಕೆ ಅರ್ಧಕ್ಕೆ ಕೈ ಚೆಲ್ಲಿ ಆರೋಪಿಗಳು ಪರಾರಿಯಾಗಿದ್ದರು.
ಈ ಸಂದರ್ಭ ಸಿಸಿಟಿವಿ ವಿಭಾಗದಿಂದ ಬಂದ ಮಾಹಿತಿಯ ಅನುಸಾರ, ಬ್ಯಾಂಕ್ ಶಾಖೆಯ ಮ್ಯಾನೇಜರ್ ಸ್ಥಳಕ್ಕೆ ಭೇಟಿ ನೀಡಿದ್ದು,ಆದರೆ, ಅಷ್ಟರಲ್ಲಿ ಆರೋಪಿಗಳು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ನಡುವೆ, ಮರುದಿನ ಬೈಕಂಪಾಡಿ ಬಳಿಯ ಜೋಕಟ್ಟೆಯಲ್ಲಿ ಜೆಸಿಬಿ ಪತ್ತೆಯಾಗಿದ್ದು, ಪಡುಬಿದ್ರಿಯಲ್ಲಿ ಕಳವು ಮಾಡಿದ್ದ ಜೆಸಿಬಿ ಎಂಬುದು ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗೆ ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಸದ್ಯ, ಈ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21), ಕೃತ್ಯಕ್ಕೆ ಹಣ ನೀಡಿ ನೆರವು ನೀಡಿದ್ದ ಮ ಧನರಾಜ್ ನಾಯ್ಕ (26) ಬಂಧಿತರು. ಇವರಿಂದ ಹೀರೊ ಹೊಂಡಾ ಸ್ಪೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾಗಬನಕ್ಕೆ ಸ್ಥಳದಾನ ಮಾಡಿದ ಯು ಟಿ ಖಾದರ್ ಸ್ಪೀಕರ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
