Uppinangady: ಗುಜರಿ ವ್ಯಾಪಾರಿಯೋರ್ವ ದಿಢೀರ್ ಮಂತ್ರವಾದಿಯಾದ ಕುರಿತು ಸಂಶಯಗೊಂಡ ಯುವಕರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ (Uppinangady).
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ವಡೆಂಕೇರಿ ಮನೆ ನಿವಾಸಿ 59ರ ಹರೆಯದ ಮಹಮ್ಮದಾಲಿ ಹಲ್ಲೆಗೀಡಾದ ವ್ಯಕ್ತಿ.
ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಮಗುವಿನ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ನೂಲು ಮಂತ್ರಿಸಿ ಕೊಡುವ ವೇಳೆ ಸ್ಥಳಕ್ಕೆ ಬಂದ ಅನ್ಸಾರ್ ಮತ್ತಿತರ ಯುವಕರ ಗುಂಪು ಗುಜರಿ ವ್ಯಾಪಾರದ ನಡುವೆ ಮಂತ್ರವಾದಿಯಾದ ಬಗೆ ಹೇಗೆಂದು ಪ್ರಶ್ನಿಸಿ ನಕಲಿ ಮಂತ್ರವಾದಿ ಎಂದು ಆರೋಪಿಸಿ ಹಲ್ಲೆ ನಡೆಸಿದೆ. ನೀನೇನು ಗುಜರಿ ಮಾರುವವನಿಗೆ ಸಡನ್ ಆಗಿ ಮಂತ್ರ ತಂತ್ರ ಕಲಿಸಿದ್ದು ಯಾರು ಎಂದು ಮಹಮ್ಮದಾಲಿಯ ಕೈಯಿಂದ ನೂಲು ಉಂಡೆ ಕಸಿದುಕೊಳ್ಳಲಾಗಿತ್ತು.
ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಯ ಬಗ್ಗೆ ಹಲ್ಲೆಗೀಡಾದ ಮಂತ್ರವಾದಿಯು ಪೊಲೀಸರಿಗೆ ದೂರು ನೀಡಿದ್ದರು.ಈ ಪ್ರಕರಣವು ಜೂನ್ 3ರಂದು ನಡೆದಿದ್ದು, ಹಲ್ಲೆ ನಡೆಸುವ ವೀಡಿಯೋ ವೈರಲ್ ಆದ ಬಳಿಕ ಉಭಯ ತಂಡದಿಂದ ಮಾತುಕತೆ ನಡೆದು ಪ್ರಕರಣವನ್ನು ರಾಜಿಯಲ್ಲಿ ಬಗೆಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಣ್ಣ ಪುಟ್ಟ ನೋವುಗಳಿಗೆ ಅಲರ್ಜಿ ಕೆಂಪು ಮಾನಸಿಕ ಅಸ್ತಿರತೆ ಮತ್ತು ಮನೋ ನೆಮ್ಮದಿಗೆ ಮಂತ್ರಿಸಿದ ನೂಲು, ಉರ್ಕು, ಕೆಂಪು ಕಪ್ಪು ದಾರ ಕಟ್ಟುವ ಪರಿಪಾಠ ರಾಜ್ಯಾದ್ಯಂತ ಇದ್ದು, ದೈವಗಳನ್ನು ಪ್ರಾಥಮಿಕವಾಗಿ ನಂಬುವ ತುಳುವರಲ್ಲಿ ಇದು ಹೆಚ್ಚಾಗಿಯೇ ಇದೆ. ನಿರುಪದ್ರವಿ ನೂಲು ಕಟ್ಟುವವರು ಏನಾದರೂ ಕೊಟ್ಟದ್ದನ್ನು ಪಡೆದು, ಎಷ್ಟೋ ಸಲ ಉಚಿತವಾಗಿ ಮನಸ್ಸಿನಲ್ಲೆ ಪ್ರಾರ್ಥಿಸಿ, ಮಂತ್ರಿಸಿ ರೋಗಿಯ ದೇಹಕ್ಕೆ ನೂಲು ಕಟ್ಟುತ್ತಾರೆ. ಈ ನಂಬಿಕೆ ಪರಿಪಾಠ ಹಿಂದುಗಳಲ್ಲದೆ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಜನರಲ್ಲಿಯೂ ಉಳಿದುಕೊಂಡಿದೆ. ಇಲ್ಲಿ ಏಕಾಏಕಿ ಗುಜರಿ ವ್ಯಾಪಾರಿ ಮಂತ್ರವಾದಿ ಆಗಿದ್ದಾನೆ ಎಂಬ ಬಗ್ಗೆ ಅನುಮಾನಗೊಂಡು ಆತನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
