Belthangady: ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ(Belthangady) ಪುದುವೆಟ್ಟು ಗ್ರಾಮದ ಯುವ ಪ್ರತಿಭಾನ್ವಿತ ಕಬ್ಬಡ್ಡಿ ಆಟಗಾರ ಸ್ವರಾಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಇದೀಗ ಬಿದ್ದು ಸಿಕ್ಕಿದೆ. ಇದೀಗ ಬಂದ ಮಾಹಿತಿಗಳ ಪ್ರಕಾರ ಲೋನ್ ಆಪ್ ಕಂಪನಿಯ ಬೆದರಿಕೆಗೆ ಬೆದರಿ ಯುವಕ ಸ್ವರಾಜ್ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ನಕಲಿ ಆಪ್ ಕಂಪನಿ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಗಳು ಜಾಲತಾಣದಲ್ಲಿ ಅಡ್ಡಾಡುತ್ತಿವೆ.

ಮೃತ ಸ್ವರಾಜ್ ಹಲವು ಆನ್ಲೈನ್ ಲೋನ್ ಆಪ್ ಕಂಪನಿ ಗಳಿಂದ ಕೈ ಸಾಲ ಪಡೆದಿದ್ದ. ಪಡೆದ ಹಣವನ್ನು ಹಂತ ಹಂತಗಳಲ್ಲಿ ಕಂಪನಿಗೆ ಪಾವತಿ ಕೂಡ ಮಾಡುತ್ತಿದ್ದ. ಆದರೂ ಬಡ್ಡಿಗೆ ಬಡ್ಡಿ ಹಾಕಿ ಹೆಚ್ಚುವರಿ ಹಣ ಪಾವತಿ ಮಾಡಲು ಸ್ವರಾಜ್ ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಹುಡುಗನನ್ನು ಬ್ಲಾಕ್ ಮೇಲ್ ಮಾಡಲು ದುಷ್ಕರ್ಮಿಗಳು ಇದೀಗ ಹೊಸ ತಂತ್ರ ಬಳಸಿದ್ದು ಬಯಲಾಗಿದೆ.
ಹುಡುಗ ಸ್ವರಾಜ್ ತನ್ನ ವಾಟ್ಸಪ್ ನಲ್ಲಿ ತನ್ನ ಅಕ್ಕನ ಮಗಳ ಡಿಪಿ ಹಾಕಿದ್ದ ಅದರ ಫೋಟೋ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಂಡಿತ್ತು. ಯಾವಾಗ ಕೇಳಿದಷ್ಟು ಹಣ ಸ್ವರಾಜ್ ಕೈಲಿ ಕೊಡಲು ಆಗಲಿಲ್ಲವೋ ಆಗ ಮಗುವಿನ ಫೋಟೋವನ್ನು ತೆಗೆದು ಮಗು ಮಾರಾಟಕ್ಕಿದೆ ‘ಬೇಬಿ ಫಾರ್ ಸೇಲ್ ‘ ಎಂದು ಬರೆದು ವಿದೇಶಿ ನಂಬರ್ ಗಳ ಮೂಲಕ ಸ್ವರಾಜ್ ಸ್ನೇಹಿತರಿಗೆ ದುಷ್ಕರ್ಮಿಗಳು ಶೇರ್ ಮಾಡಿದ್ದರು. ಈ ವಿಚಾರ ಸ್ವರಾಜ್ ಗೆ ಆತನ ಸ್ನೇಹಿತರು ತಿಳಿಸಿದ್ದರು. ಹೇಗಾದರೂ ಮಾಡಿ ಇದರಿಂದ ಬಿಡಿಸಿಕೊಳ್ಳಬೇಕು ಎಂದು ಸಾವಿಗಿಂತ ಒಂದು ದಿನ ಮೊದಲು ಸ್ವರಾಜ್ ತನ್ನ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 30,000 ರೂಪಾಯಿಗಳನ್ನು ಕಂಪನಿಗೆ ಕಟ್ಟಿದ್ದ. ಅದರಿಂದಲೂ ಕಂಪನಿ ಸಮಾಧಾನಗೊಂಡಿರಲಿಲ್ಲ. ಹೆಚ್ಚುವರಿ ದುಡ್ಡು ಕಟ್ಟಲು ಮತ್ತೆ ಪೀಡಿಸಿದ್ದಾರೆ. ಅಲ್ಲದೆ ಹೊಸ ಮತ್ತು ಖಡಕ್ ಡೆಡ್ ಲೈನ್ ಆತನಿಗೆ ನೀಡಲಾಗಿದೆ.
ಆಗಸ್ಟ್ 31 ಮಧ್ಯಾಹ್ನ 2 ಗಂಟೆಯ ಕೊನೆಯ ಡೆಡ್ ಲೈನ್:
ನಿನ್ನೆ ಹೀಗೆ ಸ್ವರಾಜ್ ಗೆ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಉಳಿದ ದುಡ್ಡು ಕಟ್ಟಲು ಡೆಡ್ ಲೈನ್ ಹಾಕಲಾಗಿದೆ. ತನ್ನಲ್ಲಿ ಕಟ್ಟಲು ಅಷ್ಟು ಹಣವಿರಲಿಲ್ಲ. ಆದುದರಿಂದ ಹುಡುಗ ಒತ್ತಡಕ್ಕೆ ಒಳಗಾಗಿದ್ದ. ಮಾನಸಿಕ ಒತ್ತಡಕ್ಕೆ ಒಳಗಾದ 24 ವರ್ಷದ ಸ್ವರಾಜ್ ಸೀದಾ ತನ್ನ ಪುದುಬೆಟ್ಟು ಗ್ರಾಮದ ಹಳೆಮನೆಗೆ ಹೋಗಿದ್ದಾನೆ. ಅಲ್ಲಿನ ಬಾತ್ ರೂಮ್ ನಲ್ಲಿ ಆತ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಇದೀಗ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ವರಾಜ್ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
