Dharmasthala: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಹೆಣ ಹೂತಿಟ್ಟ ಕೇಸ್ ವಿಚಾರವಾಗಿ ಇದೀಗ ಎಸ್ಐಟಿ ತಂಡವು ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಎಸ್‌ಐಟಿ ತಂಡ ಶನಿವಾರ (ಜು.26) ಅನಾಮಧೇಯ ವ್ಯಕ್ತಿ ಕೊಟ್ಟ ಹೇಳಿಕೆ ಆಧರಿಸಿ ತನಿಖೆ ಆರಂಭಿಸಿತ್ತು. ಬಳಿಕ ದೂರುದಾರನನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇದೀಗ SIT ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಮಂಗಳೂರಿಗೆ ಆಗಮಿಸಿದ್ದು, ಅವರ ಮುಂದೆ ಅನಾಮಿಕ ಸಾಕ್ಷಿದಾರನನ್ನು ಹಾಜರುಪಡಿಸಿ ತನಿಖೆಯನ್ನು ನಡೆಸಿದ್ದಾರೆ.
ಈಗಾಗಲೇ ಡಿಜಿಪಿ ಪ್ರಣವ್ ಮೊಹಾಂತಿ ಅವರು ಡಿಐಜಿ ಅನುಚೇತ್ ಅವರಿಂದ ಶನಿವಾರ ನಡೆದ ವಿಚಾರಣೆ ವೇಳೆ ದೂರುದಾರ ನೀಡಿದ ಹೇಳಿಕೆ, ಆತ ನೀಡಿದ ದೂರು, ಎಫ್‌ಐಆರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆದರೀಗ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಮತ್ತಷ್ಟು ತೀವ್ರತೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಕಾರಣ ಅನಾಮಿಕ ದೂರುದಾರ ವ್ಯಕ್ತಿಯ ವಿಚಾರಣೆಯಲ್ಲಿ ಭಾರೀ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ಈ ಹೇಳಿಕೆಯಿಂದಾಗಿ ಪೊಲೀಸರ ಎದೆಯಲ್ಲಿ ಢವ-ಢವ ಶುರುವಾಗಿದೆ ಎನ್ನಲಾಗಿದೆ.
ದೂರುದಾರನಿಗೆ ಎಸ್‌ಐಟಿ ಪ್ರಶ್ನೆ ಏನು?
* ಯಾವ್ಯಾವ ವರ್ಷದಲ್ಲಿ ಎಷ್ಟು ಶವ ಹೂತಿದ್ದೀರಾ?
* ಯಾವ ಪ್ರದೇಶದಲ್ಲಿ ಶವ ಹೂತು ಹಾಕಿದ್ದೀರಿ?
* ಶವ ಹೂತಿರುವ ಜಾಗವನ್ನು ತೋರಿಸುತ್ತೀರಾ?
* ನೂರಾರು ಶವ ಹೂತು ಹಾಕಿದ್ದ ವೇಳೆ ನಿನ್ನ ಜೊತೆ ಇದ್ದವರು ಯಾರು?
* ಮೃತದೇಹ ಹೂತುಹಾಕಲು ಬಲವಂತಪಡಿಸಿದ ಮೇಲ್ವಿಚಾರಕರ ಹೆಸರೇನು?
*ಅವರು ಇನ್ನೂ ಜೀವಂತವಾಗಿ ಇದ್ದಾರೆ ಅನ್ನೋ ಮಾಹಿತಿ ಇದ್ಯಾ?
* ನಿಮಗೆ ಯಾರಾದರೂ ಬೆದರಿಕೆ ಅಥವಾ ಒತ್ತಡ ಹಾಕಿದ್ರಾ?
* ನಿಮಗೆ ಶವಗಳನ್ನು ತೋರಿಸಿದ್ದು ಯಾರು?
* ಶವ ತೆಗೆಯುವ ಸಂದರ್ಭ ನಿಮ್ಮ ಜತೆ ಯಾರೆಲ್ಲಾ ಇದ್ರು?
* ವಿಡಿಯೋ ರೆಕಾರ್ಡ್ ಮಾಡಿದ್ದು ಯಾರು?
* ಕಾರಿನಲ್ಲಿ ಶವಗಳನ್ನು ತಂದಿದ್ಯಾರು? ತಂದಾಗ ಯಾವ ಸ್ಥಿತಿಯಲ್ಲಿದ್ದವು?
* ಹೂತಿಟ್ಟ ಶವಗಳಲ್ಲಿ ಮಹಿಳೆಯ ಶವಗಳೆಷ್ಟು?
* ಅಂದೇ ಪೊಲೀಸರ ಗಮನಕ್ಕೆ ಯಾಕೆ ತರಲಿಲ್ಲ?
* ನೀವು ಧರ್ಮಸ್ಥಳ ಬಿಟ್ಟು ಹೋಗಿದ್ಯಾಕೆ?
* 20 ವರ್ಷಗಳ ಬಳಿಕ ನಿಮಗೆ ಸ್ಥಳ ನೆನಪಿದ್ಯಾ? ಇದೇ ಸ್ಥಳ ಅಂತ ಹೇಗೆ ಹೇಳಬಲ್ಲಿರಾ?
ದೂರುದಾರ ನೀಡಿದ ಉತ್ತರ:
ಪಾಪಪ್ರಜ್ಞೆ ಕಾಡುತ್ತಿದೆ. ನಾನು ಹೇಳಿದ್ದೆಲ್ಲವೂ ಸತ್ಯ. ನಾನು ಶವ ಹೂತಿಟ್ಟ ಜಾಗ ತೋರಿಸುತ್ತೇನೆ. ನನಗೆ ಎಲ್ಲವೂ ನೆನಪಿದೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು, ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಅನಂತರ ನನಗೆ ಅನುಮಾನ ಬರಲು ಶುರುವಾಯ್ತು. ನನಗೆ ಯಾರ ಭಯವೂ, ಒತ್ತಡವೂ ಇಲ್ಲ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾನೆ.
ಮುಂದುವರೆದು ಆತ ಅನಾಮಿಕ ವ್ಯಕ್ತಿಯ ಪ್ರಕಾರ, ತಾನು ಹೂತಿರುವ ಶವಗಳಿಗೆ ಪೊಲೀಸ್ ತನಿಖೆ, ಕನಿಷ್ಟ ಕಾನೂನು ಪ್ರಕ್ರಿಯೆ, ಅಥವಾ ಪೋಸ್ಟ್‌ಮಾರ್ಟಂ ತಪಾಸಣೆ ನಡೆದೇ ಇಲ್ಲ. ಮೃತದೇಹಗಳಿಗೆ ಸಲ್ಲಿಸಬೇಕಾದ ಕನಿಷ್ಠ ಗೌರವಗಳು ಕೂಡ ನೀಡಲ್ಪಟ್ಟಿಲ್ಲ ಎಂಬ ಆರೋಪವನ್ನು ಅನಾಮಿಕ ವ್ಯಕ್ತಿ ವ್ಯಕ್ತಪಡಿಸಿದ್ದಾನೆ.
ಸಧ್ಯ ಈ ಹೇಳಿಕೆಗಳಿಂದ, ಶವಗಳ ಮೂಲ, ಸಾವುಗಳ ಸ್ವರೂಪ ಮತ್ತು ಶವಗಳನ್ನು ಹೂತಿರುವ ನಿಖರ ಸ್ಥಳಗಳ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ. ಅನಾಮಿಕನ ಹೇಳಿಕೆಗಳು ಹೊರಬಿದ್ದ ಬೆನ್ನಲ್ಲೇ, ಎಸ್‌ಐಟಿ ತಂಡ ತನಿಖೆಗೆ ಇನ್ನಷ್ಟು ಬಲ ನೀಡಿದ್ದು, ಈ ಮಾಹಿತಿ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ. ಅನುಮಾನಸ್ಪದ, ನಿಗೂಢ ಸಾವುಗಳು ಮತ್ತು ಅಪರಿಚಿತ ಶವಗಳ ದಾಖಲೆಗಳನ್ನು ಒಗ್ಗೂಡಿಸಿ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ.
ಎಲ್ಲದಕ್ಕೂ ಫಟಾ ಫಟ್ ಉತ್ತರ ಕೊಟ್ಟಿದ್ದಾಗಿ ಕೂಡಾ ಹೇಳಲಾಗುತ್ತಿದೆ. ಜತೆಗೆ ಎಸ್ ಐಟಿ ಅಧಿಕಾರಿಗಳು ತನ್ನನ್ನು ಗೌರವದಿಂದ ನಡೆದು ಕೊಂಡಿದ್ದು, ಸರ್ ಸರ್ ಎಂತಲೇ ಸಂಬೋಧಿಸುತ್ತಾರೆ. ನನ್ನ ಮೇಲೆ ಒತ್ತಾಯ ಒತ್ತಡ ಏನೇನೂ ಹಾಕಿಲ್ಲ. ಮಾಮೂಲಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲದಕ್ಕೂ ಸಮರ್ಪಕ ಉತ್ತರ ನೀಡಿದ್ದಾಗಿ ಭೀಮನು ತನ್ನ ವಕೀಲರಿಗೆ ಹೇಳಿದ್ದಾಗಿ ವರದಿಯಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬರುಡೆಯ ಕಾನೂನುಬಾಹಿರವಾಗಿ ಹೊರ ತೆಗೆದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಎರಡನೇ ದಿನವೂ ಎಸ್ ಐಟಿ ದೂರುದಾರನನ್ನು ಫುಲ್ ಡ್ರಿಲ್ ಮಾಡಿದ್ದು ಮುಂದೆ ಎಸ್ ಐಟಿ ನಡೆ ಏನು ಎನ್ನುವುದೇ ಕುತೂಹಲ ಹುಟ್ಟಿಸಿದೆ.
