Home » Kukkesubrahmanya: ಬೆಟ್ಟಗಳ ಸನ್ನಿಧಿಯಿಂದ ಇಳಿದು ಬಂದ ಮಹಾ ಮಳೆ, ಕುಕ್ಕೇ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ ; ಕುಕ್ಕೆಗೆ ಹೋಗುವ ಬದಲಿ ರಸ್ತೆ ಮಾರ್ಗ ಇಲ್ಲಿದೆ !

Kukkesubrahmanya: ಬೆಟ್ಟಗಳ ಸನ್ನಿಧಿಯಿಂದ ಇಳಿದು ಬಂದ ಮಹಾ ಮಳೆ, ಕುಕ್ಕೇ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ ; ಕುಕ್ಕೆಗೆ ಹೋಗುವ ಬದಲಿ ರಸ್ತೆ ಮಾರ್ಗ ಇಲ್ಲಿದೆ !

0 comments

Kukkesubrahmanya: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಗಾಳಿ, ಮಳೆಗೆ ಜಿಲ್ಲೆಗಳು ತತ್ತರಿಸಿಹೋಗಿದೆ. ಇದೀಗ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯದ( Kukkesubrahmanya)ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಹೊಳೆ, ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳು ನದಿಗಳಾಗಿ ಮಾರ್ಪಡುತ್ತಿವೆ. ಈ ಮಧ್ಯೆ ನೇತ್ರಾವತಿ, ಕುಮರಧಾರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕುಮಾರಧಾರಾ ನದಿಯ ಅಬ್ಬರಕ್ಕೆ ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ.

ಪಶ್ಚಿಮ ಘಟ್ಟದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಕುಮಾರ ದಾರಿಗೆ ಭರಪೂರ ನೀರು ಹರಿದು ಬರುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದುದರಿಂದ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಮುಂಜಾನೆಯಿಂದಲೇ ಸ್ನಾನಘಟ್ಟ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿ ತೀರಕ್ಕೆ ಹೋಗದಂತೆ ಭಕ್ತರಿಗೆ ಸೂಚಿಸಲಾಗಿದೆ.

ಸ್ನಾನಘಟ್ಟ ಮುಳುಗಡೆಯಾಗಿದ್ದು, ರಸ್ತೆಗೆ ನೀರು ಬಂದಿದ್ದು ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಸಾಗುವ ರಸ್ತೆ ಬೆಳಿಗ್ಗೆಯಿಂದಲೇ ಬ್ಲಾಕ್ ಆಗಿದೆ. ಮಳೆ ನೀರು ಹರಿವಿನ ಪ್ರಮಾಣ ಹೆಚ್ಚುತ್ತಿದ್ದು ಸದ್ಯಕ್ಕೆ ನೀರು ತಗ್ಗುವ ಲಕ್ಷಣ ಕಾಣುತ್ತಿಲ್ಲ.

ಹಾಗಾಗಿ ಭಕ್ತಾದಿಗಳು ಸುಬ್ರಹ್ಮಣ್ಯದಿಂದ ಗುತ್ತಿಗಾರು ಮಾರ್ಗವಾಗಿ ಹೊರಟು ಅಲ್ಲಿಂದ ಪಂಜದ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಸಾಗಿ ಪುತ್ತೂರು ಮತ್ತಿತರ ಕಡೆ ತಲುಪಬಹುದು. ಅದೇ ರೀತಿ ಭಕ್ತಾದಿಗಳು ಸುಬ್ರಹ್ಮಣ್ಯಕ್ಕೆ ಬರುವವರು, ಗುತ್ತಿಗಾರು ಪಂಜ ಮೂಲಕವಾಗಿ ಸುಬ್ರಹ್ಮಣ್ಯಕ್ಕೆ ಬರಬಹುದು.

ಪ್ರಕಟಣೆ ಹೊರಡಿಸಿದ ದೇವಾಲಯ

ಕಡಬ ತಾಲೂಕಿನಾದ್ಯಂತ ಕಳೆದ 2 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಸುಬ್ರಹ್ಮಣ್ಯ ಗ್ರಾಮದ ಸುಬ್ರಹ್ಮಣ್ಯ ಸ್ನಾನಘಟ್ಟದಲ್ಲಿ ಕುಮಾರಧಾರ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳು ಹಾಗೂ ಪ್ರವಾಸಿಗಳು ಬಂದು ಸ್ನಾನಘಟ್ಟದಲ್ಲಿ ಸ್ನಾನ ಮಾಡುವ ಉದ್ದೇಶಕ್ಕೆ ಇಳಿಯುತ್ತಿದ್ದು ಮುಂದೆ ಸಂಭವಿಸಬಹುದಾದಂತಹ ಅನಾಹುತಗಳನ್ನು ತಪ್ಪಿಸುವ ಹಿತದೃಷ್ಟಿಯಿಂದ ಸ್ನಾನಘಟ್ಟದ ಬಳಿ ತೆರಳದಂತೆ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಕಡಬ ತಹಶೀಲ್ದಾರ್ ರಮೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

You may also like

Leave a Comment