ಕೆಲಸ ಮಾಡುವಾಗ ಕೆಲಸದಲ್ಲಿ ಧ್ಯಾನ ಇಟ್ಟರೆ ಎಲ್ಲಾ ಕೆಲಸನೂ ಸುಸೂತ್ರವಾಗಿ ನಡೆಯುತ್ತೆ. ಇಲ್ಲದಿದ್ದರೆ ಅವಘಡಗಳು ಸಂಭವಿಸಲು ಕಾರಣವಾಗುತ್ತದೆ. ಈ ವಿಷಯ ಯಾಕೆ ಹೇಳುತ್ತಿದ್ದೇವೆ ಎಂದರೆ, ಇಲ್ಲೊಬ್ಬ ವ್ಯಕ್ತಿ ಕೆಲಸ ಮಾಡುವ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಆ್ಯಸಿಡ್ ಬಾಟಲಿಗೂ ವ್ಯತ್ಯಾಸ ಗೊತ್ತಾಗದೇ ಆ್ಯಸಿಡ್ ಸೇವಿಸಿ ಮೃತ ಪಟ್ಟಿದ್ದಾರೆ.
ಇಂತಹದೊಂದು ಘಟನೆ ಎ.18 ರಂದು ನೆರಿಯ ಗ್ರಾಮದಲ್ಲಿ ನಡೆದಿದೆ. ನೆರಿಯ ಗ್ರಾಮದ ಹೇರಾಳ್ ನಿವಾಸಿ ಬಾಬು ( 62) ಎಂಬುವವರೇ ಮೃತಪಟ್ಟ ವ್ಯಕ್ತಿ.
ಘಟನೆ ವಿವರ : ರಬ್ಬರ್ ಶೀಟ್ ಹೊಡೆಯುವ ಶೆಡ್ ಗೆ ಕೆಲಸದ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಆ್ಯಸಿಡ್ ಬಾಟಲಿ ತೆಗೆದುಕೊಂಡು ಹೋಗಿ ಒಂದು ಕಡೆ ಇಟ್ಟಿದ್ದರು. ಇವರ ಕುಡಿತದ ಚಟ ಬಹುಶಃ ಮಕ್ಕಳಿಗೆ ಗೊತ್ತಿತ್ತೇನೋ. ಹಾಗಾಗಿ ಶೆಡ್ ಗೆ ಮಕ್ಕಳು ಬಂದಿದ್ದಾರೆ. ಮಕ್ಕಳು ದೂರದಲ್ಲಿ ಬರುವುದನ್ನು ಕಂಡು ಅವಸರದಲ್ಲಿ ಮದ್ಯದ ಬಾಟಲಿ ಎಂದು ಆ್ಯಸಿಡ್ ಬಾಟಲಿ ತೆಗೆದು ಕೊಂಡು ಕುಡಿದಿದ್ದಾರೆ. ಅನಂತರ ಕೆಳಗೆ ಬಿದ್ದ ಅವರು ವಿಲವಿಲನೆ ಒದ್ದಾಡಿದ್ದಾರೆ. ಹತ್ತಿರ ಬಂದ ಮಕ್ಕಳು ಏನಾಯಿತು ಎಂದು ಕಂಡು, ಅಪ್ಪನನ್ನು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಬೇಕೆಂದು ಡಾಕ್ಟರ್ ಹೇಳಿದಾಗ, ಅಲ್ಲಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಘಟನೆ ಬಗ್ಗೆ ಕೇಸು ದಾಖಲಿಸಲಾಗಿದೆ.
