Puttur: ವಾಟ್ಸಾಪ್ ಮೂಲಕಪ್ರ ಚೋದನಕಾರಿ ಮೆಸೇಜ್ ಪ್ರಸಾರ ಮಾಡಿ, ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿದ್ದ ಆರೋಪದ ಮೇಲೆ ಕಾಸರಗೋಡು ಜಿಲ್ಲೆಯ ಅಡೂರ್ ನಿವಾಸಿ ಸತ್ಯನಾರಾಯಣ ಅಡಿಗ ಎಂಬವರ ವಿರುದ್ಧ ಪುತ್ತೂರು (Puttur) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿಯ ಪ್ರಕಾರ, ಆರೋಪಿ ಸತ್ಯನಾರಾಯಣ ಅಡಿಗ ಅವರು ತಮ್ಮ ವಾಟ್ಸಾಪ್ ಮೂಲಕ ಪ್ರಚೋದನಕಾರಿ ಬರಹಗಳನ್ನು ಹಂಚಿಕೊಂಡಿದ್ದಾರೆ. ಈ ಬರಹಗಳು ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ್ದಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ದಿನಾಂಕ ಜೂ 5 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ (ಅಪರಾಧ ಸಂಖ್ಯೆ: 42/2025) ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 353(2) (ಸಾರ್ವಜನಿಕ ಶಾಂತಿಗೆ ಭಂಗ ತರುವ ಅಥವಾ ವಿವಿಧ ವರ್ಗಗಳ ನಡುವೆ ದ್ವೇಷ, ವೈಷಮ್ಯವನ್ನು ಉತ್ತೇಜಿಸುವ ಹೇಳಿಕೆಗಳು) ಮತ್ತು 196(1)(a) (ವಿವಿಧ ಗುಂಪುಗಳ ನಡುವೆ ಧರ್ಮ, ಜನಾಂಗ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
