Puttur: ಡಿ. 28ರಂದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಪುತ್ತೂರಿನ ತೆಂಕಿಲ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರದಲ್ಲಿ ನಡೆದ ಮರಾಟಿ ಸಂಭ್ರಮ ದಲ್ಲಿ ಹಲವರು ಘನ್ಯರು ಭಾಗಿ ಆಗಿದ್ದರು.
ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ಕುಣಿತ ಭಜನೆ, ವಧುವರರ ವಿಚಾರಗೋಷ್ಠಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭೋಜನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮರಾಟಿ ನೆರವು ಅನಾವರಣ ನಡೆಯಿತು. ನಂತರ ಹಲವು ರೀತಿಯ ತುಳುನಾಡಿನ ವೈಭವ ಸಾರುವ ಕಾರ್ಯಕ್ರಮ ನಡೆಯಿತು.
ಅಂತೆಯೇ ಮರಾಟಿ ಸಮಾಜಕ್ಕೆ ಸರಕಾರ ಪ್ರತೀ ವರ್ಷ 30 ಕೋಟಿ ಅನುದಾನ ನೀಡುತ್ತದೆ. ಸಂಘಟನೆಯ ಮೂಲಕ ಸಮಾಜವನ್ನು ಒಂದಾಗಿಸಿ ಆ ಮೂಲಕ ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಆ ಕೆಲಸವನ್ನು ಇವತ್ತು ಮರಾಟಿ ಸಂರಕ್ಷಣಾ ಸಮಿತಿಯವರು ಮಾಡ್ತಾ ಇದ್ದಾರೆ. ನಿಮ್ಮ ಸಮಾಜಕ್ಕೆ ಬೇಕಾದ ಅಗತ್ಯ ಕೆಲಸಗಳನ್ನು ಮಾಡಿಕೊಡುವಂತಿದ್ದರೆ ತಿಳಿಸಿ. ನಾನು ಯಾವಗಲೂ ನಿಮ್ಮೊಂದಿಗೆ ಇದ್ದೇನೆ ಎಂದು ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶಿವಾಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಒಳಗೆ ಬರುವುದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ. ಸಮಾಜದಲ್ಲಿ ಶೋಷಿತ ವರ್ಗದವರಿಗೆ ಶಕ್ತಿಯಾಗಿ ಮರಾಟಿ ಸಂರಕ್ಷಣಾ ಸಮಿತಿ ಕೆಲಸ ನಿರ್ವಹಿಸುತ್ತಿದೆ. ನಿಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ತಮ್ಮ ಸಮಾಜದ ಯುವ ಪೀಳಿಗೆಗೆ ಉಳಿಸಿಕೊಟ್ಟವರಲ್ಲಿ ಮರಾಟಿಗರು ಮೊದಲಿಗರು ಎಂದರು.
ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲರ ಅಧ್ಯಕ್ಷತೆ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಕೃಷಿ ವಿಭಾಗದ ನಿವೃತ್ತ ನಿರ್ದೇಶಕ ಹಾಗೂ ಕಾಸರಗೋಡು ಶ್ರೀ ಶಾರದಾ ಮರಾಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಜಿ ನಾಯ್ಕ, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಬೆಂಗಳೂರು ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮ ನಾಯ್ಕ, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ರಾಜ್ಯ ಸಂಚಾಲಕ ಹಾಗೂ ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಮುಗುಳಿ, ಮಂಗಳೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷೆ ಶಾರದಾ ದಾಮೋದರ ನಾಯ್ಕ, ಸುರತ್ಕಲ್ ಶ್ರೀದುರ್ಗಾ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯಸ್ಥೆ ಕಮಲಾ ನಾರಾಯಣ ನಾಯ್ಕ ಅತಿಥಿಗಳಾಗಿ ಭಾಗವಹಿಸಿದ್ದರು. ದ.ಕ. ಜಿಲ್ಲಾ ಮರಾಟಿ ಉಪಾಧ್ಯಕ್ಷ ಸದಾಶಿವ ನಾಯ್ಕ, ಖಜಾಂಚಿ ಸೇಸಪ್ಪ ನಾಯ್ಕ ಮರಕ್ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಮಲಾ ಮಹಾಲಿಂಗ ನಾಯ್ಕ ಸ್ವಾಗತಿಸಿ, ಉಪಾಧ್ಯಕ್ಷ ಸದಾಶಿವ ನಾಯ್ಕ ಬನ್ನೂರು ವಂದಿಸಿದರು. ಸಮಿತಿ ಸಂಚಾಲಕರಾದ ಯಂ. ಶ್ರೀಧರ ನಾಯ್ಕ ಮುಂಡೋವುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ್ ಬಾಬುಮೂಲೆ, ಈಶ್ವರ ಮಚ್ಚಿಮಲೆ, ಉಷಾ ಕಿರಣ ಕಾರ್ಯಕ್ರಮ ನಿರೂಪಿಸಿದರು. ಜಾಹ್ನವಿ ಮತ್ತು ತಂಡ ಪ್ರಾರ್ಥಿಸಿದರು. ಸಭಾಕಾರ್ಯಕ್ರಮದಲ್ಲಿ ಮರಾಟಿ ವಧು – ವರರ ಸಮಾನ್ವೇಷಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ, ದಾನಿಗಳಿಗೆ ಸನ್ಮಾನ ನಡೆಯಿತು.
