Putturu: ಪುತ್ತೂರಿನ ಸಾಲ್ಮರ ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಹೆನ್ರಿ ತಾವೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಶಿವಪ್ಪ(Shivappa) ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಇರಿಸಿ ಹೋದ ಘಟನೆ ನ.16ರಂದು ಸಾಲ್ಮರ ಕೆರೆಮೂಲೆಯಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವೋ ಅವರ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಸ್ಪ್ಯಾನಿ ಮೇಸ್ತ್ರಿ ಎಂಬವರನ್ನು ಆರಂಭದಲ್ಲಿ ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹೆನ್ರಿ ತಾವೋ, ಪುತ್ರ ಕಿರಣ್, ಮತ್ತು ಸಹಾಯಕ ಪ್ರಕಾಶ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
