Sowjanya murder case: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿ ಹೋದ ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ, ಧರ್ಮಸ್ಥಳ ಗ್ರಾಮದ ಕು. ಸೌಜನ್ಯ ಪ್ರಕರಣಕ್ಕೆ(Sowjanya murder case) ಸಂಬಂಧಿಸಿದಂತೆ ಹೊಸದೊಂದು ಅಧ್ಯಾಯ ಶುರುವಾಗಿದೆ. ಟಿವಿ ಚಾನೆಲ್ ನ ಧನಿ ನಿರೂಪಕ ರಾಕೇಶ್ ಶೆಟ್ಟಿಗೆ ಸಂತ್ರಸ್ತ ತಾಯಿ ಕುಸುಮಾವತಿ ಕರೆ ಮಾಡಿದರೆ ರಾಂಗ್ ನಂಬರ್ ಅಂದು ಫೋನ್ ಕಟ್ ಮಾಡಿದ್ದಾರೆ ಪವರ್ ಟಿವಿಯ ಪ್ರಮೋಟರ್.
‘ಕ್ಷಮಿಸು ಸೌಜನ್ಯ’ ಹೆಸರಿನಲ್ಲಿ ಈ ಕುರಿತಂತೆ ಸರಣಿ ಕಾರ್ಯಕ್ರಮಗಳನ್ನು ಬಿತ್ತರಿಸಿದ ಖಾಸಗಿ ವಾಹಿನಿ ‘ಪವರ್ ಟಿವಿ’ ಸೆ.26ರಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಿತ್ತು. ‘ಕ್ಷಮಿಸು ಸೌಜನ್ಯ- ಭಾಗ 4’ ನ್ನು ಇಂದು, ಸೆ.27 ರ ಬೆಳಿಗ್ಗೆ 9 ಗಂಟೆಗೆ ಪ್ರಸಾರ ಮಾಡುವುದಾಗಿ ಘೋಷಿಸಿತ್ತು. ಸೌಜನ್ಯಳ ಫೋಟೋ ಇಟ್ಟುಕೊಂಡು ಸೌಜನ್ಯ ಹೋರಾಟದ ಮತ್ತು ಹೋರಾಟಗಾರರ ವಿರುದ್ಧವಾಗಿ ಮಾತನಾಡುವ ರಾಕೇಶ್ ಶೆಟ್ಟಿ ವಿರುದ್ಧ ಈಗಾಗಲೇ ಕುಸುಮಾವತಿಯವರು ವಿರೋಧ ವ್ಯಕ್ತಪಡಿಸಿದ್ದರು. ನನ್ನ ಮಗಳ ಫೋಟೋ ಬಳಸಿಕೊಳ್ಳಬಾರದು ಎಂದು ಸೌಜನ್ಯಳ ಅಮ್ಮ ಕುಸುಮಾವತಿಯವರು ಹೇಳಿದ್ದರು. ಇವತ್ತು ಕ್ಷಮಿಸು ಸೌಜನ್ಯ ಭಾಗ-4 ಪ್ರಸಾರ ಮಾಡುವುದೆಂದು ನಿರ್ಧಾರವಾಗಿತ್ತು. ಆದರೆ ಪ್ರಸಾರ ಮಾಡದ ಬಗ್ಗೆ ಇದೀಗ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇಂದು ವಾಹಿನಿಯಲ್ಲಿ ಕಾರ್ಯಕ್ರಮ ಬಿತ್ತರಿಸದೇ ಇರುವುದನ್ನು ಪ್ರಶ್ನಿಸಲು ಮತ್ತು ತಮ್ಮ ಮಗಳ ಫೋಟೋ ಬಳಕೆ ಮಾಡಬಾರದು ಎನ್ನಲು ಸೌಜನ್ಯ ತಾಯಿ ಕುಸುಮಾವತಿಯವರು ಚಾನೆಲ್ ಎಂ.ಡಿ ರಾಕೇಶ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ಕುಸುಮಾವತಿ ಎಂಬುದನ್ನು ತಿಳಿದ ರಾಕೇಶ್ ಶೆಟ್ಟಿ ‘ರಾಂಗ್ ನಂಬರ್’ ಎಂದು ಕರೆ ಕಡಿತಗೊಳಿಸಿದ್ದಾರೆ.
ವಾಹಿನಿ ತನ್ನ ಪ್ರೋಮೋದಲ್ಲಿ ಹೇಳಿಕೊಂಡಂತೆ ಓರ್ವ ವಿಶೇಷ ವ್ಯಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಇದರಿಂದ ಸೌಜನ್ಯಳ ಪ್ರಕರಣಕ್ಕೆ ತಿರುವು ನೀಡುತ್ತೆ ಎಂದು ವಾಹಿನಿ ಹೇಳಿಕೊಂಡಿತ್ತು. ಆದರೆ ಕಾರ್ಯಕ್ರಮ ಪ್ರಸಾರವಾಗದೇ ಇರುವುದು ಸೂಟ್ ಕೇಸ್ ತಂತ್ರ ಎಂದು ಜನರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.
ಪವರ್ ಟಿವಿ ರಾಕೇಶ್ ಶೆಟ್ಟಿಯ ಈ ವರ್ತನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಸಾರವಾಗಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು, ಹಾಗೂ ಕರೆ ಮಾಡಿರುವ ಕುಸುಮಾವತಿಯವರ ಜೊತೆ ಸೌಜನ್ಯಕ್ಕಾದರೂ ಮಾತಾನಾಡದೇ ಇರುವುದು ರಾಕೇಶ್ ಶೆಟ್ಟಿ ಸೌಜನ್ಯ ಹೆಸರಲ್ಲಿ ಹಣ ಮಾಡಲು ಹೊರಟಿದ್ದಾರಾ? ಎಂಬ ಅನುಮಾನ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಸ್ವರೂಪ ಪಡೆದುಕೊಂಡು ಓಡಾಡುತ್ತಿದೆ.
ತನ್ನ ಮೂರೂ ಸಂಚಿಕೆಯಲ್ಲಿ ಪವರ್ ಟಿವಿ ಸೌಜನ್ಯ ಪ್ರಕರಣದ ಹೋರಾಟದ ಹಾದಿಯನ್ನು ದಾರಿ ತಪ್ಪಿಸಲು ಮತ್ತು ಹೋರಾಟಗಾರರ ಧೈರ್ಯ ಕುಗ್ಗಿಸಲು ಪ್ರಯತ್ನಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಯ ಪಕ್ಷ ಇವತ್ತು ಕುಸುಮಾವತಿಯವರು ಮಾತನಾಡಿದಾಗ ಕನಿಷ್ಠ ಸೌಜನ್ಯದಿಂದ ಮಾತನಾಡಿ ಕಾರ್ಯಕ್ರಮ ಯಾಕೆ ಕ್ಯಾನ್ಸಲ್ ಆಯಿತು ಅನ್ನುವುದಾದರೂ ಹೇಳಬೇಕಿತ್ತು. ಇದೀಗ ರಾಕೇಶ್ ಶೆಟ್ಟಿ ಅವರ ಈ ನಡೆಯಿಂದ ಸೆಟಲೈಟ್ ಮಾಧ್ಯಮಕ್ಕೆ ಕಪ್ಪು ಚುಕ್ಕೆಯೊಂದು ಅಂಟಿಕೊಂಡ ಹಾಗಾಗಿದೆ. ಓರ್ವ ಸಂತ್ರಸ್ತ ಅಮ್ಮ, ಕಳೆದ 11 ವರ್ಷಗಳಿಂದ ಮಗಳಿಗೆ ನ್ಯಾಯ ಕೊಡಿಸಲು ಬದುಕಿನಲ್ಲಿ ಬೆಂದು ಹೋಗುತ್ತಿರುವ ತಾಯಿ ಕರೆ ಮಾಡಿದಾಗ ‘ರಾಂಗ್ ನಂಬರ್ ‘ ಅಂದದ್ದು ಸಮಾಜಕ್ಕೆ ಏನು ಮೆಸೇಜ್ ಕೊಟ್ಟ ಹಾಗಾಗಿದೆ ? ಎನ್ನುವುದು ಈಗ ವ್ಯಾಪಕ ಚರ್ಚೆಯಲ್ಲಿರುವ ಸಂಗತಿ. ಒಂದಂತೂ ಸತ್ಯ: ಪವರ್ ಟಿವಿಯ ಅಸಲಿ ಬಣ್ಣವು ಇವತ್ತು ಸಂತೆಯಲ್ಲಿ ಸೇಲ್ ಆಗದೆ ಉಳಿದ ಬಟ್ಟೆಯ ಬಣ್ಣ ಕರಗಿದಂತೆ ಹೊರಟು ಹೋಗಿದೆ. ಕನಿಷ್ಠ ಸೌಜನ್ಯ ಮತ್ತು ಮಾನವೀಯತೆ ಇಟ್ಟುಕೊಳ್ಳದ ವ್ಯಕ್ತಿಯನ್ನು ನಾವು ಮಾಧ್ಯಮ ಅಥವಾ ಪತ್ರಿಕಾ ಪ್ರತಿನಿಧಿ ಅನ್ನಲು ಸಾಧ್ಯವಿಲ್ಲ ಅನ್ನುತ್ತಾ ಒಂದು ಗಾಢ ವಿಷಾಧ…!!
ಇದನ್ನೂ ಓದಿ: ಸ್ನಾನಕ್ಕೆ ಹೆದರಿ ಕಾರಿನಲ್ಲಿ ಬಚ್ಚಿಟ್ಟುಕೊಂಡ ಬಾಲಕ! ನಂತರ ಆದದ್ದೇ ಭೀಕರ ಘಟನೆ!
