ಮಂಗಳೂರು :ಸುರತ್ಕಲ್ ನ ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಕೊಲೆಗೆ ಬಳಸಿದ್ದ ಕಾರು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫಾಜಿಲ್ ಮೇಲೆ ದಾಳಿ ವೇಳೆ ಬಳಸಿದ್ದ ಕಾರು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕ ಅಜಿತ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ಕು ಮಂದಿ ಹಾಗೂ ಇತರ ಇಬ್ಬರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು ಶೀಘ್ರ ಬಂಧನ ಪ್ರಕ್ರಿಯೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಶಯದ ಮೇರೆಗೆ ಮೊದಲು 21 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಮತ್ತೆ 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿ ವಶಕ್ಕೆ ಪಡೆದವರಿಂದ ದೊರೆತ ಮಾಹಿತಿಯ ಆಧಾರದಲ್ಲಿ ಆರೋಪಿಗಳ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಕೆಂಡದಂತಿರುವ ಪರಿಸ್ಥಿತಿಯಲ್ಲಿ ಕರಾವಳಿಯಲ್ಲಿ ಮತ್ತೊಂದು ರಕ್ತದೋಕುಳಿ ಚೆಲ್ಲಿತ್ತು. ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಕಳವಳದ ವಾತಾವರಣ. ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಲಾಗಿತ್ತು.
ಸುರತ್ಕಲ್ ಮಂಗಳ ಪೇಟೆಯ ಫಾಜಿಲ್ ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿದ್ದು, ಚಪ್ಪಲಿ ಖರೀದಿಗೆ ಬಂದಿದ್ದ ವಾಝಿಯ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಫಾಜಿಲ್ ಪರಿಸ್ಥಿತಿ ಚಿಂತಾಜನಕವಾಗಿತ್ತು. ಫಾಜಿಲ್ ಮೃತಪಟ್ಟಿದ್ದಾನೆ. ರಕ್ಷಿಸಲು ತೆರಳಿದ ಇನ್ನೊಬ್ಬನಿಗೂ ಗಾಯ ಆಗಿದೆ.
ಕಾರಿನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಫಾಜಿಲ್ ಗೆಳೆಯನ ಜತೆ ಅಂಗಡಿ ಒಂದರ ಮುಂದೆ ಮಾತುಕತೆ ನಡೆಸುತ್ತಿದ್ದ. ಗೆಳೆಯ ರಕ್ಷಿಸಲು ಪ್ರಯತ್ನಿಸಿದ್ದ. ದುಷ್ಕರ್ಮಿಗಳು ಮೂರಕ್ಕಿಂತ ಹೆಚ್ಚು ಜನ ಇದ್ದರು ಎಂಬ ಮಾಹಿತಿ ಇದೆ. ಅಟ್ಯಾಕ್ ನ ವಿವರ ಸಿಸಿ ಟಿವಿಯಲ್ಲಿ ಸೆರೆ ಆಗಿದ್ದು, ಫಾಜಿಲ್ ತಪ್ಪಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದ.
ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಫಾಝಿಲ್ ನನ್ನು ಆಸ್ಪತ್ರೆಗೆ ದಾಖಲಿಸಲಾದರೂ ಜೀವ ಉಳಿಯಲಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
