ಸಮಾಜದಲ್ಲಿ ಸಂಭವಿಸುವ ಒಂದಲ್ಲ ಒಂದು ದುರ್ಘಟನೆಗಳು ಮನ ಕರಗಿಸುತ್ತಲೇ ಇರುತ್ತದೆ. ಇಲ್ಲೊಂದು ಹೃದಯ ವಿದ್ರಾವಕ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರು ನಗರದ ಶಾಲೆಯೊಂದರಲ್ಲಿ ತನ್ನ ತರಗತಿ ಶಿಕ್ಷಕ ನಿಂದಿಸಿ, ಥಳಿಸಿದ್ದಾರೆಂದು ಸೆಪ್ಟೆಂಬರ್ 27 ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಪಶ್ಚಿಮದಲ್ಲಿರುವ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಬಾಲಕ ಶ್ರೇಯಸ್ ಎಂಬಾತ ಆತ್ಮಹತ್ಯೆ ಮಾಡಿದವನು ಎಂದು ಗುರುತಿಸಲಾಗಿದೆ. ಬಾಲಕ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಆ ಬಳಿಕ ವಿದ್ಯಾರ್ಥಿ ಬರೆದಿರುವ ಆತ್ಮಹತ್ಯೆ ಪತ್ರ ಸಿಕ್ಕಿರುತ್ತದೆ. ಆ ಪತ್ರದಲ್ಲಿ ಶಿಕ್ಷಕ ಕಿರುಕುಳ ನೀಡಿದ್ದಾನೆಂದು ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶಿಕ್ಷಕ, ಬಾಲಕನು ದಲಿತ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿ ಬೇಕಾಬಿಟ್ಟಿಯಾಗಿ ಮನಬಂದಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಥಳಿಸಿದ್ದಾರೆ ಎಂಬ ಕುಟುಂಬದ ಆರೋಪದ ಮೇಲೆ ಸೇಂಟ್ ಪ್ಯಾಟ್ರಿಕ್ ಮೆಮೋರಿಯಲ್ ಹೈಸ್ಕೂಲ್ ವಿರುದ್ಧ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ-2015 ರ ಸೆಕ್ಷನ್ 75 ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.
“ನಾನು ಶಾಲೆಗೆ ಭೇಟಿ ನೀಡುವ ಅದೇ ಸಂದರ್ಭದಲ್ಲಿ ಅವರು ನನ್ನ ಮಗನನ್ನು ಥಳಿಸಿರುವುದನ್ನು ನಾನು ನೋಡಿದ್ದೇನೆ” ಎಂದು ಶ್ರೇಯಸ್ ತಂದೆ ಮಾರ ಹನುಮಯ್ಯ ಹೇಳಿದ್ದಾರೆ.
“ ಒಂದು ದಿನ ಮಗನ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಶಾಲೆಯಲ್ಲಿ ವಿಚಾರಿಸಿದಾಗ ನನ್ನ ಮಗ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಎಂದು ಶಾಲೆಯವರು ಹೇಳಿದ್ದರು. ದಿಲೀಪ್ ಎಂಬ ಗಣಿತ ಶಿಕ್ಷಕ ಅವನನ್ನು ನಿಂದಿಸಿ ಥಳಿಸಿದ್ದಾನೆ ಎಂದು ಆಮೇಲೆ ಗೊತ್ತಾಯ್ತುʼ ಎಂದು ಅವರು ಹೇಳಿದ್ದಾರೆ.
