ಪ್ರೀತಿಯಲ್ಲಿ ಬಿದ್ದ ಪ್ರಿಯತಮ ಅದು ಕೂಡಾ ಸರಕಾರಿ ನೌಕರನೋರ್ವ ಸಾರ್ವಜನಿಕರ ದುಡ್ಡಿನ ಲಪಟಾಯಿಸಿ ತನ್ನ ಪ್ರೇಯಸಿಯನ್ನು ಖುಷಿಯಾಗಿರಿಸಿಟ್ಟಿದ್ದ. ಪ್ರಿಯತಮೆಯ ಚಿನ್ನದ ಆಸೆ ಪೂರೈಸಲು ಬಿಬಿಎಂಪಿ ಅಧಿಕಾರಿಯೊಬ್ಬ ಸಾರ್ವಜನಿಕರ ಹಣಕ್ಕೆ ಕನ್ನ ಹಾಕಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಬ್ಯಾಟರಾಯನಪುರದ ಬಿಬಿಎಂಪಿ ಕಚೇರಿಯಲ್ಲಿ ಎಸ್ ಡಿ ಎ ಆಗಿರುವ ಪ್ರಕಾಶ್ ಕಳೆದ ಒಂದು ವರ್ಷದಿಂದ ಬಿಬಿಎಂಪಿ ಬಿಲ್ ಹಣವನ್ನು ತನ್ನ ಪ್ರೇಯಸಿ ಕಾಂಚನಾ ಅಕೌಂಟ್ ಗೆ ವರ್ಗಾವಣೆ ಮಾಡಿದ್ದ. ಈಗ ಆಡಿಟ್ ವೇಳೆ ಪ್ರಕಾಶ್ ಹಣ ದುರುಪಯೋಗ ಮಾಡಿಕೊಂಡಿರುವುದು ಬಯಲಿಗೆ ಬಂದಿದೆ.
ಬ್ಯಾಟರಾಯನಪುರ ಬಿಬಿಎಂಪಿ EE ರಾಜೇಂದ್ರ ನಾಯ್ಕ್ ಅವರು ಪ್ರಕಾಶ್ ಬಳಿ ಹಣದ ದುರ್ಬಳಕೆ ಕುರಿತು ಮಾಹಿತಿ ಕೇಳಿದ್ದು ಹಣ ವರ್ಗಾವಣೆ ಕುರಿತು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಒಟ್ಟು 14 ಲಕ್ಷ 7 ಸಾವಿರ ರೂ. ಹಣವನ್ನು ಪ್ರಕಾಶ್ ತನ್ನ ಪ್ರಿಯತಮೆ ಕಾಂಚನಾ ಅಕೌಂಟ್ ಗೆ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಬಿಬಿಎಂಪಿ EE ರಾಜೇಂದ್ರ ನಾಯ್ಕ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಪ್ರಕಾಶ್ ಮತ್ತು ಕಾಂಚಾನಾ ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಕಾಶ್ ಕಳುಹಿಸಿದ ಹಣದಿಂದ ಕಾಂಚನಾ ಚಿನ್ನ ಖರೀದಿಸಿ, ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಳು. ಇವರಿಬ್ಬರೂ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
