ಬೆಂಗಳೂರಿನ ರೈಲು ಪ್ರಯಾಣಿಕರೇ ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ಅದೇನೆಂದರೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣಿಕರನ್ನು ಇನ್ನಷ್ಟು ಸಂಖ್ಯೆಯಲ್ಲಿ ಸೆಳೆಯಲು ಭಾರತೀಯ ರೈಲ್ವೆ ನಿರ್ಧಾರ ಮಾಡಿದೆ.
ಹೌದು, ಈಗ ಸದ್ಯ 6 ರೈಲುಗಳು ಮಾತ್ರ ಏರ್ಪೋರ್ಟ್ ಮಾರ್ಗವಾಗಿ ಸಂಚರಿಸುತ್ತಿವೆ. ಆದರೆ ಈ ರೈಲುಗಳಲ್ಲಿ ಅತಿ ಕಡಿಮೆ ಜನರು ಪ್ರಯಾಣಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿರುವುದರಿಂದ ದೊಡ್ಡಜಾಲ ಮತ್ತು ಬೆಟ್ಟಹಲಸೂರಿನಲ್ಲೂ ಈ ಮಾರ್ಗದ ರೈಲುಗಳಿಗೆ ಸ್ಟಾಪ್ ಕೊಡಲು ನೈಋತ್ಯ ರೈಲ್ವೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಸದ್ಯ ಈ ರೈಲುಗಳ ಮೂಲಕ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇವಲ 30 ರೂಪಾಯಿಗಳಲ್ಲಿ ನೀವು ತಲುಪಬಹುದು. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ರೈಲ್ವೆ ಹಾಲ್ಟ್ ಸ್ಟೇಶನ್ ಆರಂಭಿಸಲಾಗಿದೆ. ಆದರೆ ಯಾಕೋ ಏನೋ ಸಾರ್ವಜನಿಕರು ಈ ರೈಲುಗಳ ಬಳಕೆಯತ್ತ ನಾಗರಿಕರು ಹೆಚ್ಚಾಗಿ ಆಸಕ್ತಿ ವಹಿಸಿಲ್ಲ. ಹಾಗಾಗಿ ರೈಲ್ವೆ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಇನ್ನೂ ಎರಡು ಸ್ಥಳಗಳಲ್ಲಿ ರೈಲು ನಿಂತಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು ಎಂಬುದು ರೈಲ್ವೆ ಇಲಾಖೆಯ ಲೆಕ್ಕಾಚಾರ. ಇದರಿಂದ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲ ದೊರೆಯುವ ಸಾಧ್ಯತೆಗಳಿದ್ದು ಇದರ ಉಪಯೋಗ ಎಷ್ಟಾಗಲಿದೆ ಎಂದು ನೋಡಬಹುದು.
