ಬೆಂಗಳೂರು:ರಾಜ್ಯ ರಾಜಕಾರಣದ ಮೂರು ವರ್ಷದ ಸಾಧನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಜನಸ್ಪಂದನ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದೆ.
ಈ ಮೊದಲು ಬಿಜೆಪಿ ಜನೋತ್ಸವ ಹೆಸರಿನಡಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಿತ್ತಾದರೂ ಪುತ್ತೂರು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ಆ ಬಳಿಕ ದ.ಕ ಜಿಲ್ಲೆಯಲ್ಲಿ ಉಂಟಾದ ಉದ್ವಿಗ್ನತೆ ಅಡ್ಡಿಯಾಗಿತ್ತು.
ಆ ಬಳಿಕ ಮತ್ತೊಮ್ಮೆ ದಿನ ನಿಗದಿಯಾಗಿದ್ದು, ಈ ವೇಳೆ ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ಸೂತಕವಾಗಿತ್ತು.ಇದೆಲ್ಲಾ ಅಡೆತಡೆಗಳ ಮಧ್ಯೆ ಜನೋತ್ಸವ ಹೆಸರನ್ನು ತೆಗೆದು ಜನಸ್ಪಂದನ ಹೆಸರಿನಡಿಯಲ್ಲಿ ಕಾರ್ಯಕ್ರಮ ಆಯೋಜನೆ ನಡೆದಿದ್ದು, ಆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ನಡೆಯಲಿದೆ.
ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಾ. ಕೆ ಸುಧಾಕರ್ ಸಹಿತ ಪಕ್ಷದ ಹಿರಿಯರು, ಸಚಿವರುಗಳ ಸಹಿತ ಶಾಸಕರು ಪಾಲ್ಗೊಳ್ಳಲಿದ್ದಾರೆ.
ಸುಮಾರು 3ಲಕ್ಷಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದ್ದು,ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಕರೆತರಲು 5000 ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದ್ದಲ್ಲದೇ, ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ.
