Bengaluru: ಕ್ಯಾಬ್ ನಲ್ಲಿ ಮಹಿಳೆ ಗೆಳೆಯನೊಂದಿಗೆ ಮಾತನಾಡುತ್ತಿದ್ದ ಮಾತುಗಳನ್ನು ಡ್ರೈವರ್ ಕದ್ದು ಕೇಳಿಸಿಕೊಂಡು ಕೊನೆಗೆ ಮಹಿಳೆಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ (Bengaluru) ಹೆಸರುಘಟ್ಟ ನಿವಾಸಿ ಕಿರಣ್ ಕುಮಾರ್ ಎಂಬಾತನೇ ಕ್ಯಾಬ್ ಡ್ರೈವರ್.
ಕಿರಣ್ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಕಳೆದ ನವೆಂಬರ್ 22ರಂದು ಮಹಿಳೆಯೊಬ್ಬರು ಇಂದಿರಾನಗರದಿಂದ ಬಾಣಸವಾಡಿವರೆಗೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಕಿರಣ್ ಮಹಿಳೆಯನ್ನು ಪಿಕಪ್ ಮಾಡಿದ್ದ. ಮಹಿಳೆ ಕ್ಯಾಬ್ನಲ್ಲಿ ಕುಳಿತು ತಮ್ಮ ಗೆಳೆಯನ ಜೊತೆ ಫೋನ್ನಲ್ಲಿ ವೈಯಕ್ತಿಕ ವಿಚಾರಗಳನ್ನು ಮಾತಾಡಿದ್ದಾರೆ. ಇತ್ತ ಮಹಿಳೆಗೆ ತಿಳಿಯದ ಹಾಗೆ ಕಿರಣ್ ಕ್ಯಾಬ್ ಓಡಿಸುತ್ತಲೇ ಆಕೆ ಮಾತನಾಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದಾನೆ.
ಕೆಲ ದಿನಗಳ ಬಳಿಕ ಕ್ಯಾಬ್ ನಲ್ಲಿ ಮಹಿಳೆ ಫೋನ್ ನಲ್ಲಿ ಮಾತನಾಡಿದ ಮಾತುಗಳನ್ನೇ ದಾಳವಾಗಿಟ್ಟುಕೊಂಡು ಆಕೆಗೆ ನಿಮ್ಮ ಕ್ಲಾಸ್ಮೇಟ್ , ಬಾಲ್ಯ ಸ್ನೇಹಿತ ಅಂತ ಹೇಳಿಕೊಂಡು ಮೆಸೇಜ್ ಮಾಡಿ ಹತ್ತಿರವಾಗಿದ್ದಾನೆ. ಮಹಿಳೆ ಈತನ ಮಾತು ನಂಬಿದ್ದಾಳೆ ಎಂದು ಖಚಿತಪಡಿಸಿಕೊಂಡು ಬಳಿಕ ತಾನು ತುಂಬಾ ಕಷ್ಟದಲ್ಲಿದ್ದೇನೆ ಸಹಾಯ ಮಾಡು ಎಂದು ಹೇಳಿದ್ದು, ಮಹಿಳೆ ಆತನಿಗೆ ಸುಮಾರು 22 ಲಕ್ಷ ರೂ. ಹಣ ನೀಡಿದ್ದಾಳೆ.
ಕೆಲ ದಿನಗಳ ಬಳಿಕ ಹಣ ಪಡೆದಿದ್ದು ಫ್ರೆಂಡ್ ಅಲ್ಲ ಕ್ಯಾಬ್ ಡ್ರೈವರ್ ಎಂಬ ವಿಚಾರ ಆಕೆಗೆ ತಿಳಿದಿದೆ. ಇದರಿಂದ ಕೋಪಗೊಂಡ ಮಹಿಳೆ ಕ್ಯಾಬ್ ಡ್ರೈವರ್ ಅನ್ನು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಕಿರಣ್, ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾನೆ. ನಿನ್ನ ಹಾಗೂ ಗೆಳೆಯನ ವಿಷಯವನ್ನು ನಿನ್ನ ಗಂಡನಿಗೆ ಹೇಳುತ್ತೇನೆ. ಈ ವಿಚಾರ ಯಾರಿಗೂ ಹೇಳಬಾರದು ಅಂದ್ರೆ ಹಣ ಕೊಡು ಅಂತ ಬೆದರಿಸಿದ್ದಾನೆ. ಆತನ ಬೆದರಿಕೆಗೆ ಭಯಗೊಂಡ ಮಹಿಳೆ 750 ಗ್ರಾಂ ಚಿನ್ನಾಭರಣ ನೀಡಿದ್ದಾಳೆ.
ಮಹಿಳೆಯ ಒಡೆವೆಯನ್ನೆಲ್ಲ ಅಡವಿಟ್ಟು ಕ್ಯಾಬ್ ಚಾಲಕ ಮೋಜು ಮಸ್ತಿ ಮಾಡುತ್ತ ಎಂಜಾಯ್ ಮಾಡಿದ್ದಾನೆ. ಪದೇ ಪದೇ ಕಿರಣ್ ಹಣಕ್ಕಾಗಿ ಬೇಡಿಕೆ ಇಡುವುದರಿಂದ ಮಹಿಳೆ ಬೇಸತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು ದಾಖಲಿಸಿದ್ದಾಳೆ. ಪೋಲಿಸರು ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ನನ್ನ ಬಂಧಿಸಿ, ಗಿರವಿ ಇಟ್ಟಿದ್ದ ಚಿನ್ನಾಭರಣವನ್ನೂ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಹತ್ಯೆ: ಕಾಂತಾರ ನಟನಿಂದ ಸ್ಫೋಟಕ ಹೇಳಿಕೆ – ‘ನಮಗ್ಯಾಕೆ ಅನ್ನೋದನ್ನು ಬಿಡಿ, ದನಿ ಎತ್ತಿ ‘ ಎಂದ ನಟ
