Narega: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮ ಸ್ವರಾಜ್ಯದ ಮತ್ತು ಸರ್ವರ ಉದಯ ಬಯಸುವ ಉತ್ತಮ ಯೋಜನೆಯಾಗಿತ್ತು.
ಆದರೆ ಕೇಂದ್ರ ಸರ್ಕಾರವು ಆ ಹೆಸರನ್ನು ವಿ ಬಿ ಜಿರಾಮ್ ಜಿ ಎಂಬ ಹೆಸರಿಗೆ ಬದಲಿಸುವ ಮೂಲಕ ಯೋಜನೆಯಲ್ಲಿದ್ದ ನಿಯಮಗಳನ್ನು ಕೂಡ ಬದಲಾಯಿಸಿರುವುದು ಖಂಡನೀಯ ವಿಷಯವಾಗಿದೆ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ರಾಜ್ಯ ಸಮಿತಿ ಸದಸ್ಯ ಕೆ ಪಿ ಜಾನಿ ಯವರು ತಿಳಿಸಿದ್ದಾರೆ.
ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನತೆಗೆ ಒಂದು ವರವಾಗಿತ್ತು. ವಿಶೇಷವಾಗಿ ಮಹಿಳೆಯರ ಉದ್ಧಾರ ಮಾಡುವ ಮೂಲಕ ರಾಷ್ಟ್ರದ ಶಾಶ್ವತ ಅಭಿವೃದ್ಧಿಗೆ ಅಡಿಪಾಯ ಹಾಕಲು ಕಂಡುಹಿಡಿದ ಮಹತ್ ಯೋಜನೆಯಾಗಿತ್ತು. ಈ ಯೋಜನೆಯಿಂದ ಗ್ರಾಮಗಳಲ್ಲಿ ರಸ್ತೆಗಳು ಇನ್ನಿತರ ಮೂಲಭೂತ ಸೌಲಭ್ಯಗಳು ಅಭಿವೃದ್ಧಿಗೊಳ್ಳುತ್ತಿತ್ತು.ಆದರೆ ಬಿಜೆಪಿ ಆಡಳಿತವು ಗಾಂಧೀಜಿಯವರ ಗ್ರಾಮಸ್ವರಾಜ್ಯ ಮತ್ತು ಸರ್ವೋದಯ ಎಂಬ ಆಶಯಕ್ಕೆ ವಿರುದ್ಧವಾಗಿ ವರ್ತಿಸಿ ಬಡವರ ಉದ್ಧಾರ ಆಗಬಾರದು ಎಂಬ ಉದ್ದೇಶವನ್ನು ಹೊಂದಿರುವಂತೆ ಮಾಡುತ್ತಿದೆ.
ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವ ಸಂದರ್ಭ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳದೆ ನೇರವಾಗಿ ಕಾಯ್ದೆ ಜಾರಿಗೊಳಿಸುವ ಮೂಲಕ ತನ್ನ ಸರ್ವಾಧಿಕಾರ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನರೇಗಾ ಯೋಜನೆಯಲ್ಲಿ 100 ದಿನ ಕನಿಷ್ಠ ಕೆಲಸ ನೀಡಬೇಕಾಗಿತ್ತು.ಆ 100 ಕೆಲಸಗಳನ್ನೇ ಈ ಸರಕಾರ ಸರಿಯಾಗಿ ನೀಡಿಲ್ಲ ಮತ್ತೆ ಅವರು ನೂತನವಾಗಿ ತಂದಿರುವ ಯೋಜನೆಯಲ್ಲಿರುವ 120 ದಿನಗಳ ಕೆಲಸವನ್ನು ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.ಹಾಗೇ ಕಾರ್ಮಿಕರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಈಗ ಹೊಸ ಕಾಯ್ದೆ ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ.
ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯತ್ ಗಳಿಗೂ ಖಾತ್ರಿಯಿರುವುದಿಲ್ಲ. ಬೇಕಾದರೆ ಕೊಡಬಹುದು ಇಲ್ಲವಾದಲ್ಲಿ ಬಿಟ್ಟುಹಾಕಬಹುದು. ವರ್ಷದ ಎಲ್ಲಾ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸಲಾಗಿದ್ದು, ಕೃಷಿ ಚಟುವಟಿಕೆ ಅವಧಿಯ 60 ದಿನ ಯೋಜನೆಯಡಿ ಯಾವುದೇ ಉದ್ಯೋಗ ನೀಡಲಾಗುವುದಿಲ್ಲ.
ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ತೆಗೆದು ಹಾಕಲಾಗಿದೆ.ಈ ಮೊದಲು ಇದ್ದ ಯೋಜನೆಯಲ್ಲಿ ಗ್ರಾಮದ ಜನರೇ ನೇರವಾಗಿ ಕೆಲಸಗಳ ಪಟ್ಟಿ ಮಾಡಬಹುದಾಗಿದ್ದ ಹಕ್ಕನ್ನು ಇದೀಗ ನೂತನವಾಗಿ ನೀಡಿರುವ ಯೋಜನೆಯಲ್ಲಿ ಅದನ್ನು ಕಿತ್ತುಕೊಳ್ಳಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು.
ಒಟ್ಟಿನಲ್ಲಿ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರದ್ದು ಗೊಳಿಸುವ ಮೂಲಕ ಕೇಂದ್ರದ ಬಿಜೆಪಿ ಸರಕಾರ ಕೃಷಿಕೂಲಿ ಕಾರ್ಮಿಕರನ್ನು ಮತ್ತು ಕಟ್ಟಡ ಕಾರ್ಮಿಕ ವರ್ಗ ಹಾಗೂ ಗ್ರಾಮೀಣ ಭಾಗದ ಬಡ ರೈತರಿಗೆ ಮತ್ತು ಗ್ರಾಮಗಳಿಗೆ ಅನ್ಯಾಯ ಮಾಡಿದ್ದು ಇದನ್ನು ನಾವು ಖಂಡಿಸುತ್ತೇವೆ ಮತ್ತು ಹೊಸ ಕಾಯ್ದೆಯನ್ನು ರದ್ದುಪಡಿಸಿ ನರೇಗಾ ಕಾಯ್ದೆ ಮತ್ತೆ ಜಾರಿಗೊಳಿಸಬೇಕು ಎಂದರು .
