Ujire: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಋತುಚಕ್ರ ಕುರಿತ ಎರಡು ದಿನದ ಜಾಗೃತಿ ಕಾರ್ಯಕ್ರಮದ (ಸೈಕಲ್ ಸೆನ್ಸ್: ರಿಥಿಂಕಿಂಗ್ ಪೀರಿಯಡ್ಸ್, ಪ್ಯಾಡ್ಸ್ ಆ್ಯಂಡ್ ಪೇನ್) ಮೊದಲ ದಿನ ಜ.5ರಂದು ಮಾತನಾಡಿದ ಬೆಂಗಳೂರಿನ ಇಕೋ ಹಬ್ ಫೌಂಡೇಶನ್ ಸ್ಥಾಪಕಿ ಮತ್ತು ಸಿಇಒ ವೈಶಾಖಾ ಕುಲಕರ್ಣಿ ಅವರು “ಇಂದು ಅನೇಕ ತಾಯಂದಿರು ಮಾನಸಿಕ ನೋವು, ಅಸ್ವಸ್ಥತೆ, ಸೋಂಕು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳೊಂದಿಗೆ ಮೌನವಾಗಿ ಹೋರಾಡುತ್ತಿದ್ದಾರೆ. ನೋವು ಅನುಭವಿಸುವುದೇ ಸ್ತ್ರೀತ್ವ ಎಂದು ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ತ್ರೀಯರ ಆರೋಗ್ಯವನ್ನು ಗೌರವಿಸುವುದು ಎಂದರೆ ಕೇವಲ ಮಾತುಗಳಲ್ಲಿ ಅಲ್ಲ. ನಮ್ಮ ಆಯ್ಕೆಗಳಲ್ಲಿ ಅದು ಕಾಣಬೇಕು. ಆರೋಗ್ಯಕ್ಕೆ ಗೌರವವೇ ನಿಜವಾದ ಪೂಜೆ ಎಂದು “ಹೇಳಿದರು.
ಕಾಲೇಜಿನ ಮಹಿಳಾ ಕುಂದುಕೊರತೆ ನಿವಾರಣೆ ಕೋಶ ಮತ್ತು ಆಂತರಿಕ ದೂರು ಸಮಿತಿ (WGRC & ICC) ವತಿಯಿಂದ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಹಾಗೂ ಮಹಿಳಾ ಅಭಿವೃದ್ಧಿ ಕೋಶದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಟ್ಟೆಯಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್ ಬಳಕೆಯನ್ನು ಸೂಚಿಸಿದ ಅವರು, ತಮ್ಮ ಸಂಸ್ಥೆಯ ಉತ್ಪನ್ನವಾದ ‘ಮೈತ್ರಿ’ ಸ್ಯಾನಿಟರಿ ಪ್ಯಾಡ್ ಪರಿಚಯಿಸಿದರಲ್ಲದೆ, ಎರಡೂ ವಿಧದ ಪ್ಯಾಡ್ ಗಳನ್ನು ಬಳಸಿ ಹೀರಿಕೊಳ್ಳುವಿಕೆ ಗುಣದ ಪ್ರಾತ್ಯಕ್ಷಿಕೆ ತೋರಿಸಿದರು.ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಅನೇಕ ಯುವತಿಯರು ತಮ್ಮ ದೇಹ ನೀಡುವ ಸೂಚನೆಗಳನ್ನು ನಿರ್ಲಕ್ಷಿಸಿ, ಆರೋಗ್ಯ ಸಮಸ್ಯೆಗಳನ್ನು ಮೌನವಾಗಿ ಅನುಭವಿಸುತ್ತಿದ್ದಾರೆ. ಋತುಚಕ್ರ ಸಮಯದಲ್ಲಿ ನೋವು ಉಂಟಾಗುವುದನ್ನು ಸಹಜವೆಂದು ಒಪ್ಪಿಕೊಳ್ಳುವ ಬದಲು, ಅದರ ಪರ್ಯಾಯಗಳನ್ನು ಅರಿತುಕೊಳ್ಳುವುದು ಅಗತ್ಯ. ಇಂದು ಹಲವಾರು ಆರೋಗ್ಯಕರ ಮತ್ತು ಸುರಕ್ಷಿತ ಪರ್ಯಾಯಗಳು ಲಭ್ಯವಿವೆ ಎಂದರು.
ಇಕೋ ಹಬ್ ಫೌಂಡೇಶನ್ ಪ್ರಾಜೆಕ್ಟ್ ಲೀಡ್ ಶೋಮಾ, ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕಿ ದಿವ್ಯ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಮಹಿಳಾ ಕುಂದುಕೊರತೆ ನಿವಾರಣೆ ಕೋಶ ಮತ್ತು ಆಂತರಿಕ ದೂರು ಸಮಿತಿ ಅಧ್ಯಕ್ಷೆ ದೀಪಾ ಆರ್.ಪಿ. ಸ್ವಾಗತಿಸಿ, ತೃತೀಯ ಬಿಸಿಎ ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕಿ ಅಕ್ಷತಾ ಜೈನ್ ವಂದಿಸಿದರು.
