Venur: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ದಿನಾಂಕ 6.01.2025 ರಂದುಸಂಸ್ಥಾಪಕರ ದಿನಾಚರಣೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಸ್ವತಃ ರಚಿಸಿದ ಹಾಡನ್ನು ಎಲ್ಲಾ ಶಿಕ್ಷಕರು ಹಾಡುವ ಮೂಲಕ ಈ ಕಾರ್ಯಕ್ರಮ ಪ್ರಾರಂಭಗೊಂಡಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಮಾತನಾಡಿ, ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ಹಾಕಿದ ಗಟ್ಟಿಯಾದ ಬುನಾದಿ ಇಂದು ಶಾಲೆ ಇಷ್ಟು ಎತ್ತರ ಬೆಳೆದಿದೆ. ಪುತ್ರನಾಗಿ ಹೆಮ್ಮೆಯ ತಂದೆ, ಶಿಷ್ಯನಾಗಿ ಎತ್ತರ ಸ್ಥಾನದಲ್ಲಿ ಗುರು, ತಿದ್ದಿ ದಾರಿ ತೋರಿಸುವ ಮಾರ್ಗದರ್ಶನದಿಂದ ಎಸ್‌ಎಸ್‌ಎಲ್‌ಸಿ 12 ಬಾರಿ ಹಾಗೂ ಪಿಯುಸಿಯಲ್ಲಿ ಸತತ 4 ವರ್ಷ ಶೇ.100 ಫಲಿತಾಂಶ ಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಂಸ್ಥಾಪಕ ಗಿರೀಶ್ ಕೆ.ಎಚ್. ಅವರು ಅನಿಸಿಕೆ ವ್ಯಕ್ತಪಡಿಸಿ, ಗುಡ್ಡದಂತಿದ್ದ ಈ ಪ್ರದೇಶ ಪುಟ್ಟ ಮಕ್ಕಳ ನಿರಂತರ ಪಾದಸ್ಪರ್ಶದಿಂದ ಇದು ಬೆಳಗಿದೆ. ಸಂಸ್ಥೆಯು ರಾಜ್ಯ, ರಾಷ್ಟಮಟ್ಡದ ಸಾಧನೆಗೆ ಇಲ್ಲಿ ವಿದ್ಯೆ ನೀಡಿದ ಶಿಕ್ಷಕರು ಹಾಗೂ ವಿದ್ಯೆ ಪಡೆದ ವಿದ್ಯಾರ್ಥಿಗಳೇ ಕಾರಣ ಎಂದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್, ಕುಂಭ ಶ್ರೀ ವೈಭವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶ್ವಿತ್ ಕುಲಾಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಆದ ಶ್ರೀ ಮನೋಜ್, ಶಾಲಾ ಶೈಕ್ಷಣಿಕ ಸಲಹೆಗಾರ ಶ್ರೀಮತಿ ಉಷಾ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕರಾದ ಶ್ರೀ ಅಭಿಲಾಶ್ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಅಕ್ಷತಾ ಇವರು ನಿರೂಪಿಸಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ನಿತೇಶ್ ವಂದಿಸಿದರು.
