Twitter Blue Tick: ಟ್ವಿಟರ್ ಹಕ್ಕಿಯ ಜತೆಗೇ ಬ್ಲೂ ಟಿಕ್ ಹಾರಿ ಹೋಗಿದೆ. ಟ್ವಿಟ್ಟರ್ (Twitter) ಸಂಸ್ಥೆಯು ಅಧಿಕೃತ ಖಾತೆಗಾಗಿ ನೀಡಿದ್ದ ಬ್ಲೂಟಿಕ್ (Twitter Blue Tick) ಅನ್ನು ತೆಗೆದು ಹಾಕಿದೆ. ಈ ಹಿಂದೆಯೇ ಸಂಸ್ಥೆಯು ಚೆಕ್ ಮಾರ್ಕ್ ಕುರಿತು ಪ್ರಕಟನೆಯನ್ನು ನೀಡಿ, ನಿಗದಿತ ಹಣ ಪಾವತಿ ಮಾಡಿದರೆ ಮಾತ್ರ ಬ್ಲೂ ಟಿಕ್ ಮೊದಲಿನಂತೆಯೇ ಉಳಿಯುತ್ತದೆ ಎನ್ನುವ ಸಂದೇಶವನ್ನು ಟ್ವಿಟ್ಟರ್ ಬಾರಿ ಬಾರಿ ನೀಡಿತ್ತು. ಕೆಲವರು ಟಿಕ್ ಬೇಕಾದವರು ಹಣ ಪಾವತಿಸಿ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಅದು ಬೇಕಿಲ್ಲ ಅನ್ನಿಸುತ್ತೆ. ಹಾಗಾಗಿ ದುಡ್ಡು ಬಿಚ್ಚಲು ಹೋಗಿಲ್ಲ. ಮತ್ತೆ ಕೆಲವರು ಏನಾಗಲಿಕ್ಕಿಲ್ಲ ಅಂದುಕೊಂಡಿದ್ದರೋ ಏನೋ, ಒಟ್ಟಾರೆ ನೀಲಿ ಹಕ್ಕಿ ಹಾರಿ ಹೋಗುವ ಸಮಯದಲ್ಲಿ ಎರಡು ನೀಲಿ ಕಡ್ಡಿಗಳನ್ನು ಕಾಲಲ್ಲಿ ಸಿಕ್ಕಿಸಿಕೊಂಡು ಹಾರಿದೆ.
ಹಣ ಪಾವತಿ ಮಾಡದ ಬಹುತೇಕ ಸಿಲೆಬ್ರಿಟಿಗಳ (Celebrity) ಬ್ಲೂಟಿಕ್ ನಿನ್ನೆಯೇ ಮಾಯವಾಗಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ ರಾಜಕೀಯ ನಾಯಕರ ಬ್ಲೂ ಟಿಕ್ ಮಾಯವಾಗಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಿನಿಮಾ ತಾರೆಯರಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್ ಇನ್ನೂ ಹಲವು ಗಣ್ಯರು ಟ್ವಿಟರ್ ಬ್ಲೂಟಿಕ್’ ನ್ನು ಕಳೆದುಕೊಂಡಿದ್ದಾರೆ. ಸ್ಯಾಂಡಲ್ ವುಡ್’ನ ನಟ (Sandal wood) ಯಶ್, ಸುದೀಪ್, ರಮ್ಯಾ ಸೇರಿದಂತೆ ಬಹುತೇಕ ನಟ ನಟಿಯರ ಖಾತೆಯಿಂದ ನೀಲಿ ಕಡ್ಡಿ ಕರಗಿಹೋಗಿದೆ.
ಬ್ಲೂ ಟಿಕ್ ಬಗ್ಗೆ ನಟ ಪ್ರಕಾಶ್ ರಾಜ್ ವಿಭಿನ್ನವಾಗಿಯೇ ಪ್ರತಿಕ್ರಿಯೆ ನೀಡಿದ್ದು, ‘ಬೈ ಬೈ ಬ್ಲೂಟಿಕ್ ’ ಎಂದು ಟ್ವೀಟ್ ಮಾಡಿದ್ದಾರೆ. ಎಸ್.ಎಸ್. ರಾಜಮೌಳಿ, ಕಮಲ್ ಹಾಸನ್, ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಖಾತೆಯ ಬ್ಲೂಟಿಕ್ ಉಳಿಸಿಕೊಂಡಿದ್ದಾರೆ.
ಖಾತೆದಾರರು ಬ್ಲೂ ಟಿಕ್ ಉಳಿಸಿಕೊಳ್ಳಬೇಕಾದರೆ ಮಾಸಿಕ 20 ಡಾಲರ್ ಶುಲ್ಕ ಪಾವತಿಸಬೇಕು ಎಂದು ಮಸ್ಕ್ ಆರಂಭದಲ್ಲಿ ಹೇಳಿದ್ದರು. ನಂತರ ಅದಕ್ಕೆ ಬಂದ ತೀವ್ರ ವಿರೋಧಗಳ ನಂತರ ಶುಲ್ಕ ತಗ್ಗಿಸಿದ್ದರು. ಹಣ ಪಾವತಿ ಮಾಡದವರ ‘ಬ್ಲೂ ಟಿಕ್’ಗಳನ್ನು ಏಪ್ರಿಲ್ ಆರಂಭದಿಂದಲೇ ತೆಗೆಯಲಾಗುವುದು ಎಂದು ಮಸ್ಕ್ ಹೇಳಿದ್ದರು. ನಿನ್ನೆ ಗುರುವಾರ ಸಂಜೆಯಿಂದ ಈ ಪ್ರಕ್ರಿಯೆ ಸಾಮೂಹಿಕವಾಗಿ ನಡೆದಿದೆ. ಎಲೋನ್ ಮಸ್ಕ್ (Elon Musk) ಹೇಳಿದಂತೆ ನಡೆದು ಕೊಂಡಿದ್ದಾರೆ.
ಇದನ್ನು ಓದಿ : Day To Plant Tulsi: ಈ ದಿನ ತುಳಸಿ ಗಿಡವನ್ನು ನೆಟ್ಟು ನೋಡಿ, ಲಕ್ಷ್ಮಿ ಒಲಿದು ಬರ್ತಾಳೆ!
