KERC: ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವು (KERC) ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ನಂಬರ್ ಅನ್ನು ಆಧಾರ್ ಸಂಖ್ಯೆಯೊಂದಿಗೆ (Aadhar number) ಲಿಂಕ್ ಮಾಡುವಂತೆ ಸರಕಾರಕ್ಕೆ ಸೂಚನೆ ನೀಡಿದ್ದು, ಈ ಸಲಹೆ ಮುಂದಿನ ದಿನಗಳಲ್ಲಿ ಮೀಟರ್ ಅಳವಡಿಕೆಗೆ ಮುನ್ನುಡಿ ಆಗಬಹುದೇ? ಎಂಬ ಪ್ರಶ್ನೆ ರೈತರಲ್ಲಿ (farmer) ಮೂಡಿ, ಕಳವಳಕ್ಕೀಡಾಗಿದ್ದಾರೆ.
ಇದೀಗ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಇಲ್ಲ. ಕರಾವಳಿ ಭಾಗದಲ್ಲಿ ಇದ್ದರೂ ರೀಡಿಂಗ್ ಮಾಡುವುದಿಲ್ಲ. ಹಾಗಾಗಿ ಎಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಆಗುತ್ತಿದೆ ಎಂಬುದರ ಸರಿಯಾದ ಲೆಕ್ಕವೂ ಇಲ್ಲ. ಆದರೆ ದಶಕಗಳಿಂದ ಶೇ. 34ರಷ್ಟು ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹೋಗುತ್ತಿದೆ. ಈಗ ವಿದ್ಯುತ್ ಪೂರೈಕೆ ಪ್ರಮಾಣ ಲೆಕ್ಕಹಾಕಿ ಆರು ತಿಂಗಳಲ್ಲಿ ಜೋಡಣೆ ಮಾಡಬೇಕು. ಇಲ್ಲದಿದ್ದರೆ ಅಂತಹ ಗ್ರಾಹಕರಿಗೆ ಸಹಾಯಧನ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ರೈತರು ಒಂದು ಜಮೀನಿನಲ್ಲಿ ನಾಲ್ಕೈದು ಕೊಳವೆಬಾವಿಗಳನ್ನು (borwell) ಹೊಂದಿರುತ್ತಾರೆ. ಅವುಗಳಲ್ಲಿ ಒಂದಕ್ಕಿಂತ ಹೆಚ್ಚು ಆರ್.ಆರ್. ನಂಬರ್ ಇರುತ್ತದೆ. ಆದರೆ ಅದನ್ನು ಬಳಸುತ್ತಿರುವ ಗ್ರಾಹಕರ ಆಧಾರ್ ಸಂಖ್ಯೆ ಒಂದೇ ಆಗಿರುತ್ತದೆ. ಈಗ ಪಂಪ್‌ಸೆಟ್‌ಗಳ ಆರ್.ಆರ್. ನಂಬರ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿದರೆ ಈ ಎಲ್ಲಾ ಕೊಳವೆಬಾವಿಗಳು ಸ್ಥಗಿತಗೊಳ್ಳೋದು ಖಚಿತ!!. ಇನ್ನು ತುಂಡು ಜಮೀನುಗಳಲ್ಲಿಯೂ ಹೀಗೆಯೇ ಮಾಡಿರುತ್ತಾರೆ. ಕೆಲವರು ಬೇನಾಮಿ ಹೆಸರಿನಲ್ಲಿ ಆರ್.ಆರ್. ಸಂಖ್ಯೆ ಹೊಂದಿದ್ದು, ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಒಂದು ವೇಳೆ ಆಧಾರ್ ಲಿಂಕ್ ಮಾಡಿದರೆ, ಅದು ಬಯಲಾಗುವುದರ ಜೊತೆಗೆ ಸೌಲಭ್ಯ ಸಿಗದೇ ಹೋಗಬಹುದು.
“ಆಧಾರ್ ಲಿಂಕ್’ನ ಮೂಲ ಉದ್ದೇಶ ರೈತರಿಗೆ ನೀಡುತ್ತಿರುವ ಸಬ್ಸಿಡಿ ತೆಗೆದು ಹಾಕುವುದು. ಈಗ ಆರ್.ಆರ್. ಸಂಖ್ಯೆ ಮತ್ತು ಆಧಾರ್ ಲಿಂಕ್ ಮಾಡುತ್ತಾರೆ. ನಂತರ ಬಹುಸಂಪರ್ಕಗಳು ಸ್ಥಗಿತವಾಗುತ್ತೆ. ಕೊನೆಗೆ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸುತ್ತಾರೆ. ಒಟ್ಟಾರೆ ಮೀಟರ್ ಅಳವಡಿಕೆಗೆ ಈ ನಡೆ ಮುನ್ನುಡಿ ಆಗಿದೆ. ರೈತರಿಗೆ ಅನುಕೂಲ ಆಗುವುದನ್ನು ಮಾಡಬೇಕೇ ಹೊರತು, ಅನಾನುಕೂಲ ಆಗುವಂಥದ್ದನ್ನಲ್ಲ. ಸರಕಾರ ಬೇಡವಾದದ್ದನ್ನೇ ಮಾಡುತ್ತದೆ” ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದರು.
ಇದನ್ನು ಓದಿ: Rain updates: ರಾಜ್ಯದಲ್ಲಿ ಅಕಾಲಿಕ ಮಳೆಗೆ ಅವಾಂತರ , ದಿಢೀರ್ ರಸ್ತೆ ಕುಸಿತ, ಬೆಚ್ಚಿಬಿದ್ದ ಜನರು
