Job offer: ಮನುಷ್ಯರು ಒಂದಲ್ಲಾ ಒಂದು ವಿಷ್ಯದಲ್ಲಿ ಆಸೆ ಬುರುಕರಾಗಿರುತ್ತಾರೆ. ಆದ್ದರಿಂದ ಜೀವಿಸಲು ಕೈ ತುಂಬಾ ದುಡ್ಡು ಇರಬೇಕು. ಅಥವಾ ದುಡಿಮೆ ಇರಬೇಕು. ಆದರೆ ಕೆಲವು ಮುದಿ ಜೀವಿಗಳು ಬಯಸೋದು ಮಾತ್ರ ಭಾವನಾತ್ಮಕ ಪ್ರೀತಿಯನ್ನು ಎಂಬುದು ಇಲ್ಲಿ ಸಾಬೀತು ಮಾಡಿದ್ದಾರೆ.
ಹೌದು, ಬಿಡುವಿಲ್ಲದ ಜೀವನ ಎಷ್ಟಾದರೂ ನೆಮ್ಮದಿ ನೀಡುವುದಿಲ್ಲ ಜೊತೆಗೆ ಬಂಧುಗಳ ಹಿಡಿತವಿಲ್ಲ, ಇನ್ನು ಬಿಡುವು ಇದ್ದವರಿಗೆ ಜೊತೆಯಲ್ಲಿ ಯಾರು ಇರುವುದಿಲ್ಲ.
ಹಾಗೆಯೇ ಮಹಿಳೆ ಒಬ್ಬಳು ಪ್ರತಿಷ್ಠಿತ ಸುದ್ದಿ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಎಷ್ಟೊತ್ತಿಗೋ ಊಟ, ಎಷ್ಟೊತ್ತಿಗೋ ತಿಂಡಿ, ಕುಟುಂಬದವರು, ಸ್ನೇಹಿತರು, ಬಂಧುಗಳ ಜೊತೆ ಬೇರೆಯದಷ್ಟು ಸಮಯವಿರದಂತಹ ಪರಿಸ್ಥಿತಿಯಲ್ಲಿ ಇದ್ದಳು. ಇಂತಹ ಸ್ಥಿತಿ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ.
ಇದೀಗ ಬ್ಯುಸಿ ಲೈಫ್ ನಲ್ಲಿ ಮುಳುಗಿದ್ದ ಚೀನಾದ ಮಹಿಳೆಗೆ ಆಕೆಯ ಪೋಷಕರೇ ಒಂದು ಆಫರ್ (Job offer) ನೀಡುತ್ತಾರೆ ನೋಡಿ. ಕೆಲಸವನ್ನು ಬಿಟ್ಟು ನಮ್ಮ ಜತೆ ಬಂದುಬಿಡು, ನಿನಗೆ ತಿಂಗಳಿಗೆ 570 ಡಾಲರ್ ಅಂದರೆ ಸುಮಾರು 47 ಸಾವಿರ ರೂ. ವೇತನ ನೀಡುವುದಾಗಿ ಆಫರ್ ಕೊಟ್ಟೇಬಿಟ್ಟರು.
ನೋಡು ನಮ್ಮನ್ನು ನೋಡಿಕೊಂಡು, ನಮ್ಮ ಜತೆ ಆರಾಮಾಗಿ ಇರ್ತೀಯಾ ಅತ್ವಾ ಇದೇ ತಲೆನೋವಿನ ಕೆಲಸವನ್ನು ಮುಂದುವರೆಸುತ್ತೀಯಾ ಎಂದು. ಒಂದೊಮ್ಮೆ ನಿನಗೆ ಸೂಕ್ತವಾದ ಉದ್ಯೋಗ ಸಿಕ್ಕರೆ ಹೋಗು, ಅಥವಾ ಕೆಲಸ ಮಾಡುವ ಮನಸ್ಥಿತಿ ಇಲ್ಲದಿದ್ದರೆ ಇಲ್ಲಿಯೇ ನಮ್ಮೊಂದಿಗೆ ಇದ್ದುಬಿಡು ಎನ್ನುತ್ತಾರೆ ಪೋಷಕರು.
ಬ್ಯುಸಿ ಲೈಫ್ ಗಿಂತ ಈ ಬಂಪರ್ ಆಫರ್ ಬೆಸ್ಟ್ ಎಂದು, ಆಕೆ ಒಪ್ಪೇ ಬಿಟ್ಟಳು. ಹೌದು, ಲಕ್ಷಾಂತರ ರೂ. ಸಂಬಳ ಬರುವ ಕೆಲಸವನ್ನು ಬಿಟ್ಟು ಫುಲ್ ಟೈಂ ಡಾಟರ್ ಆಗಿಯೇ ಬಿಟ್ಟಳು. ಸದ್ಯ ಪೋಷಕರ ನಿವೃತ್ತದ ಪಿಂಚಣಿ 10 ಸಾವಿರ ಯುವಾನ್ಗಿಂತಲೂ ಹೆಚ್ಚು, ಅದರಲ್ಲಿ 4 ಸಾವಿರ ಯುವಾನ್ ಅನ್ನು ಮಗಳಿಗೆ ಕೊಡುವುದಾಗಿ ಹೇಳಿದ್ದಾರೆ.
ಅಷ್ಟಕ್ಕೂ, ಅವರ ದಿನಚರಿ ಏನು ಗೊತ್ತಾ? ಬೆಳಗ್ಗೆ 1 ಗಂಟೆ ಪೋಷಕರೊಂದಿಗೆ ನೃತ್ಯ ಮಾಡುವುದು, ಬಳಿಕ ದಿನಸಿ ಶಾಪಿಂಗ್ಗೆ ತೆರಳುವುದು, ತಂದೆಯೊಂದಿಗೆ ರುಚಿ ರುಚಿಯಾದ ಅಡುಗೆ ಮಾಡುವುದು, ತಿಂಗಳ ಕೊನೆಯಲ್ಲಿ ಎಲ್ಲಿಗಾದರೂ ಪಿಕ್ ನಿಕ್ ಹೋಗುವುದು ಇಷ್ಟೇ ಆಕೆಯ ಕೆಲಸ.
ಆಧುನಿಕ ಜೀವನದ ಶೈಲಿಯಲ್ಲಿ ಎಷ್ಟು ಮಂದಿಗೆ ಈ ರೀತಿ ತಮ್ಮ ಪೋಷಕರೊಂದಿಗೆ ಕಳೆಯಲು ಸಮಯ ಸಿಗುತ್ತೆ ಹೇಳಿ. ದುಡ್ಡಿಗಿಂತ ಕೆಲವೊಮ್ಮೆ ಆತ್ಮತೃಪ್ತಿ ತುಂಬಾ ಖುಷಿ ನೀಡುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯ. ಇದರಲ್ಲಿ ಇನ್ನೆರಡು ಮಾತಿಲ್ಲ.
