V Somanna: “ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ನಾನು ಹೋಗುವುದಿಲ್ಲ” ಎಂದು ಲೋಕಸಭಾ ಚುನಾವಣೆಯಲ್ಲಿ(Parliament election) ಸ್ಪರ್ಧಿಸುವ ಬಗ್ಗೆ, ವಿಧಾನಸಭೆ ಚುನಾವಣೆಯಲ್ಲಿ(Assembly election) ಹೀನಾಯವಾಗಿ ಸೋತಿರೋ ವಿ ಸೋಮಣ್ಣ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಹೌದು, ಪಕ್ಷಗಳ ತೆರೆ ಮರೆಯಲ್ಲಿ 2024ರ ಲೋಕಸಭಾ ಚುನಾವಣೆಯ ತಯಾರಿ ಈಗಾಗಲೇ ಶುರುವಾಗಿದ್ದು, ನಿನ್ನೆ ದಿನ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ(V Somanna) ಸ್ಪರ್ಧಿಸುತ್ತಾರೆ, ಸೋಮಣ್ಣಗೆ ನೀವು ಸಾಥ್ ನೀಡಿ ಎಂದು ವೀರಶೈವ ಸಮಾಜಕ್ಕೆ ಸಂಸದ ಜಿ.ಎಸ್.ಬಸವರಾಜು(G S Basavaraj) ಮನವಿ ಮಾಡಿದ್ದಾರೆಂದು ನಗರದಲ್ಲಿ ನಡೆದ ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆನ್ನಲಾದ ಕೆಲವು ಮಾತುಗಳು ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ವಿ ಸೋಮಣ್ಣ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ನಾನು ಹೋಗುವುದಿಲ್ಲ. ಲೋಕಸಭಾ ಚುನಾವಣೆಯ ಆಕಾಂಕ್ಷಿಯೂ ನಾನಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದು, ಬಸವರಾಜು ಅವರು ಹಿರಿಯರಾಗಿದ್ದು, ನನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಅವರಿಗೆ ಋಣಿಯಾಗಿದ್ದೇನೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಅಂದಹಾಗೆ ನಿನ್ನೆ ವೈರಲ್ ಆದ ಆಡಿಯೋದಲ್ಲಿ ತುಮಕೂರಿನ ಹಾಲಿ ಸಂಸದ(Tumkur present MP)ಬಸವರಾಜು ಅವರು “ನಿಮ್ಮಲ್ಲೇ ಕಿತ್ತಾಡಿದ್ರೆ, ನಿಮ್ಮನ್ನೇ ಒದ್ದು ಓಡಿಸುತ್ತಾರೆ. ಅದು ಕೂಡ ಸನ್ನಿಹಿತವಾಗಿದೆ. ನನ್ನದಾಯ್ತು, ನನ್ನ ಸೀಟನ್ನು ಸೋಮಣ್ಣಗೆ ಕೊಡುತ್ತಾರೆ. ಮುಂದಿನ ಬಾರಿ ನಾನು ಚುನಾವಣೆಯಲ್ಲಿ ನಿಲ್ಲಲ್ಲ. ನಾನು ದೆಹಲಿಗೆ ಹೋಗಿದ್ದಾಗ ವರಿಷ್ಠರಿಗೆ ಈ ಬಗ್ಗೆ ತಿಳಿಸಿದ್ದೇನೆ. ಸೋಮಣ್ಣ ಅವರ ಬೆಂಬಲಕ್ಕೆ ನಿಲ್ಲಿ. ಸಮಾಜ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಮುಂದೆ ಬರುವವರನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ, ಇಬ್ಬಗೆ ನೀತಿ ಮಾಡಿಕೊಳ್ಳಬೇಡಿ. ಇವರ ಮೇಲೆ ಅವರನ್ನು, ಅವರ ಮೇಲೆ ಇವರನ್ನು ಎತ್ತಿ ಕಟ್ಟಬೇಡಿ. ನಾನು ಈವರೆಗೆ ಲೋಕಸಭೆಗೆ 8 ಬಾರಿ ಸ್ಪರ್ಧಿಸಿದ್ದು, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತಿದ್ದೇನೆ. ಈ ಹಿಂದೆ ನಮ್ಮವರೇ ನನ್ನನ್ನು ಸೋಲಿಸಿದರು. ಆದರೆ, ನಾನು ಸೋತರೂ, ಗೆದ್ದರೂ ಒಂದೇ ರೀತಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ’ ಎಂದು ಹೇಳಿದ್ದರು.
