Suresh Gowda: ಕೆಲಸ ಮಾಡಿದರೂ ತಮ್ಮನ್ನು ಸೋಲಿಸಿದ ಜನರ ಮೇಲೆ ಮಾಜಿ ಶಾಸಕರೊಬ್ಬರು ಗರಂ ಆಗಿದ್ದಾರೆ. ” ಇನ್ನು ಮುಂದೆ ಸಹಾಯ ಕೇಳಿಕೊಂಡು ಯಾರೂ ನನ್ನ ಬಳಿ ಬರಬೇಡಿ. ಇನ್ನು ನಾನು ಯಾವುದೇ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ” ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಸುರೇಶ್ ಗೌಡ(Suresh Gowda) ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ಮಾಜಿ ಶಾಸಕರು ಅಭಿನಂದನಾ ಸಭೆಯಲ್ಲಿ ಮಾತನಾಡುತ್ತಿದ್ದರು. ” ನನಗೆ ನಾನು ಅತಿಯಾಗಿ ನಂಬಿದವರಿಂದಲೇ ಮೋಸ ಆಗಿದೆ. ನಾನೀಗ ಚುನಾವಣೆಯಲ್ಲಿ ಸೋತಿದ್ದೇನೆ. ಈ ಚುನಾವಣೆ ಸೋಲಿನಿಂದ ನನಗೆ ಬೇಸರವಾಗಿದ್ದು, ನನ್ನ ಮನಸ್ಸು ಕಲ್ಲಾಗಿದೆ. ಇನ್ಮುಂದೆ ವೈಯಕ್ತಿಕ ಕಷ್ಟ ಹೇಳಿಕೊಂಡು ಯಾರು ಕೂಡ ನನ್ನ ಬಳಿ ಬರಬೇಡಿ ” ಎಂದು ಜನರಿಗೆ ಕೈ ಮುಗಿದು ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್ ಗೌಡ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಎನ್. ಚೆಲುವರಾಯಸ್ವಾಮಿ ವಿರುದ್ಧ 4,414 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಇದಕ್ಕೂ ಹಿಂದೆ ಸುರೇಶ್ ಗೌಡರು ನಾಗಮಂಗಲದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಭರವಸೆಗಳನ್ನು ಲೇವಡಿ ಮಾಡಿದ್ದರು. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಕರೆಂಟ್ ಬಿಲ್ ಕೇಳಲು ಬಂದರೆ ನನ್ನನ್ನು ಕರೆಯಿರಿ. ನಾನು ಬರ್ತೀನಿ ಎಂದು ಹೇಳಿದ್ದರು. ಸಮಸ್ಯೆ ಬಂದರೆ ನನ್ನನ್ನು ಕರೆಯಿರಿ ಎಂದಿದ್ದರು. ಆದರೆ ಈಗ ಸೋತ ನೋವಿನಿಂದ ‘ಯಾವುದೇ ಕಷ್ಟ ಹೇಳಿಕೊಂಡು ನನ್ನ ಬಳಿ ಬರಬೇಡಿ ‘ ಎಂದು ನೊಂದು ಹೇಳಿದ್ದಾರೆ.
