Gruhalakshmi Scheme: ಕಾಂಗ್ರೆಸ್ ಪಕ್ಷ (Congress) ಬಹುಮತದಿಂದ ಚುನಾವಣೆ ಯಲ್ಲಿ ಗೆದ್ದು, 5 ಗ್ಯಾರಂಟಿಗಳ (5 guarantees) ಭರವಸೆ ನೀಡಿರುವ ಪ್ರಕಾರ, ಇದೀಗ ಐದು ಭಾರವಸೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಅರ್ಜಿ ಸಲ್ಲಿಸಲು ಜೂನ್ 16, ಶುಕ್ರವಾರ ಅವಕಾಶ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆಯ ಫಲಾನುಭವಿಗಳು ‘ಗೃಹಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ವಿಧಿಸಿಲ್ಲ ಎಂದಿದ್ದಾರೆ. ಇನ್ನು ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿ ಪಡಿಸಿಲ್ಲ. ವರ್ಷವಿಡೀ ಅರ್ಜಿ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆನ್‌ಲೈನ್ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಲು ಕಷ್ಟವಾಗುವವರು ಆಫ್‌ಲೈನ್ ಮಾದರಿಯಲ್ಲಿ ಅಂದರೆ ಕೈಲಿ ಬರೆದ ಅರ್ಜಿಗಳನ್ನೂ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ವಿಳಾಸ ಪುರಾವೆಗಳನ್ನು ಸಲ್ಲಿಸಬೇಕು. ಪಡಿತರ ಚೀಟಿ ವಿವರ ನೀಡಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.
ಅರ್ಜಿ ಸಲ್ಲಿಸುವ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ವಿವರದೊಂದಿಗೆ ಪತಿಯ ಆಧಾರ್ ಕಾರ್ಡ್ ವಿವರನ್ನೂ ಕೊಡಬೇಕು. ಈ ಯೋಜನೆಯು ನಮ್ಮ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ಸದ್ಯ ಈ ಯೋಜನೆಗೆ ವಾರ್ಷಿಕ 30 ಸಾವಿರ ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅರ್ಜಿ ಸಲ್ಲಿಕೆ ಕುರಿತು ಯಾವುದೇ ಅನುಮಾನವಿದ್ದರೆ 1902 ಸಂಪರ್ಕಿಸಬಹುದು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: Human Sacrifice: ಮಾಂತ್ರಿಕನ ಜೊತೆ ಸೇರಿ ತನ್ನ ಮಗನನ್ನೇ ನರಬಲಿ ನೀಡಿದ ಮಲತಾಯಿ!
