Anna bhagya Scheme: ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಉಚಿತ 10 ಕೆ.ಜಿ. ಅಕ್ಕಿ (ಅನ್ನಭಾಗ್ಯ ಯೋಜನೆ) (Anna bhagya Scheme) ವಿತರಣೆಯನ್ನು ಜು.1ರಿಂದ ಜಾರಿಗೆ ತರಲು ಯೋಜನೆ ರೂಪಿಸಿದೆ. ಆದರೆ, ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಕೇಂದ್ರದ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K shivkumar) ಸಿಡಿದೆದ್ದು, ಜೂ.20 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಗುರುವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಜು.1ರಿಂದ ಅನ್ನಭಾಗ್ಯ ಯೋಜನೆಯಡಿ ಜನರಿಗೆ ಉಚಿತ ಅಕ್ಕಿ ನೀಡಲು ಯೋಜನೆ ರೂಪಿಸಲಾಗಿತ್ತು. ಆದರೆ,
ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ, ನಮ್ಮಲ್ಲಿ ಇಲ್ಲ ಎಂದಿದ್ದಾರೆ. ನಾವು ಅಕ್ಕಿ ಪುಕ್ಸಟ್ಟೆ ಕೇಳಿಲ್ಲ. ದುಡ್ಡು ಕೊಡ್ತೀವಿ ಕೊಡಿ ಎಂದು ಕೇಳುತ್ತಿದ್ದೇವೆ. ಅಕ್ಕಿ ಕೊಡದಿರುವ ಕೇಂದ್ರದ ನಿಲುವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ದೊಡ್ಡ ಹೋರಾಟ ಮಾಡುತ್ತೇವೆ.
ಮುಂದಿನ ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಎಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾಗಿಯಾಗಬೇಕೆಂದು ಮನವಿ ಮಾಡುತ್ತಿದ್ದೇನೆ. ಯಾವ ರೀತಿ ಕಾರ್ಯಕ್ರಮ ಮಾಡಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರಿಗೆ ಮಾರ್ಗದರ್ಶನ ಮಾಡುತ್ತೇವೆ ಎಂದು ಹೇಳಿದರು.
