KSRTC: ಸದ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹಿನ್ನೆಲೆ ಬಸ್ ಪೂರ್ತಿ ಮಹಿಳೆಯರೇ ತುಂಬಿ ಹೋಗಿದ್ದಾರೆ. ಕಂಡೆಕ್ಟರ್’ಗಳೂ ಬಸ್ ಪೂರ್ತಿ ತುಂಬಿದ ಮಹಿಳೆಯರನ್ನು ನಿಯಂತ್ರಿಸಲು ಹರಸಾಹಸಪಡುವ ದೃಶ್ಯಗಳು ವೈರಲ್ ಆಗುತ್ತಿವೆ. ಒಂದೆಡೆ ಮಹಿಳೆಯರು ತುಂಬಿ ತುಳುಕುತ್ತಿದ್ದ ಬಸ್’ನ ಡೋರೇ ಕಿತ್ತು ಬಂದಿದೆ. ಹೇಳುತ್ತಾ ಹೋದರೆ ಮುಗಿಯದಷ್ಟು ಫ್ರೀ ಬಸ್ ಪ್ರಯಾಣದ ಎಫೆಕ್ಟ್ ಗಳಿವೆ. ಇದೀಗ ಟಿಕೆಟ್ ಯಂತ್ರ ಕೆಟ್ಟುಹೋಯಿತು ಎಂದು ಬಸ್’ನಲ್ಲಿದ್ದ ಮಹಿಳೆಯರನ್ನು ಚಾಲಕ ಬಸ್ಸಿನಿಂದ (KSRTC) ಇಳಿಸಿರುವ ಘಟನೆ ಹನೂರಿನಲ್ಲಿ ನಡೆದಿದೆ.
ಘಟನೆಯು ಶನಿವಾರ ನಡೆದಿದ್ದು, ವಿದ್ಯಾರ್ಥಿಗಳು ಸಂಜೆ ಬಸ್ಸಿನಲ್ಲಿ ಮನೆಗೆ ತೆರಳುವ ವೇಳೆ ಮಾರ್ಗಮಧ್ಯೆ ಕೆಎಸ್‌ಆರ್‌ಟಿಸಿ ಬಸ್’ನ ಟಿಕೆಟ್ ಯಂತ್ರ (ETM) ಕೆಟ್ಟು ಹೋಗಿದೆ. ಬಸ್ ಕಾಡಿನ ಪ್ರದೇಶದಲ್ಲಿ ತೆರಳುತ್ತಿತ್ತು. ಟಿಕೆಟ್ ಯಂತ್ರ (ETM) ಕೆಟ್ಟು ಹೋದ ಹಿನ್ನೆಲೆ ಬಸ್ ಡ್ರೈವರ್ ಬಸ್ ನಲ್ಲಿದ್ದ ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿನಿಯರನ್ನು ಕಾಡಿನ ಮಧ್ಯೆಯೇ ಇಳಿಸಿ ವಾಪಾಸ್ಸಾಗಿದ್ದಾರೆ.
ಕೊಳ್ಳೇಗಾಲ ಡಿಪೋ ಬಸ್‌ನ ಟಿಕೆಟ್ ನೀಡುವ ಯಂತ್ರ ಕೈಕೊಟ್ಟಿದ್ದು, ಮಹಿಳೆಯರಿಗೆ ಉಚಿತ ಟಿಕೆಟ್ ಇರುವ ಕಾರಣ ಅವರಿಗೆ ಟಿಕೆಟ್ ವಿತರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಹಿಳಾ ಪ್ರಯಾಣಿಕರನ್ನು ದಾರಿ ಮಧ್ಯೆ ಇಳಿಸಿ ಬಸ್ ವಾಪಸ್ ಹನೂರು ಬಸ್ ನಿಲ್ದಾಣಕ್ಕೆ ಹೋಗಿದೆ. ಸಾರಿಗೆ ನೌಕರರ ಈ ರೀತಿಯ ವರ್ತನೆಯಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಕುಪಿತಗೊಂಡು ನಡೆದುಕೊಂಡೆ ತಮ್ಮ ಗ್ರಾಮವನ್ನು ಸೇರಿದ್ದಾರೆ. ಈ ಬಗ್ಗೆ ಬಸ್ಸಿನಲ್ಲಿದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
