Kolkata: ಕೋಲ್ಕತ್ತಾ ಪಶ್ಚಿಮ ಬಂಗಾಳದ ಪಚಾಯತ್ ಚುನಾವಣೆಗೂ ಮೊದಲೇ ಮುರ್ಷಿದಾಬಾದ್‌ನ ಜಂಗಿಪುರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐದು ಮಕ್ಕಳು ಗಾಯಗೊಂಡಿದ್ದಾರೆ. ಪ್ರತಿಯೊಬ್ಬರ ವಯಸ್ಸು 7ರಿಂದ 11ವರ್ಷಗಳು. ಈ ಘಟನೆ ಸೋಮವಾರ (ಇಂದು)ನಡೆದಿದೆ.
ಫರಕ್ಕಾದ ಉತ್ತರದಲ್ಲಿರುವ ಇಮಾಮ್ ನಗರದ ಹೊಲಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದ್ದು, ಮಕ್ಕಳು ಅವುಗಳನ್ನು ಚೆಂಡುಗಳೆಂದು ಭಾವಿಸಿ ಎತ್ತಿಕೊಂಡು ಆಟವಾಡ ತೊಡಗಿದ್ದಾರೆ. ಈ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲ ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.
ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾಂಬ್ ಸ್ಫೋಟದಲ್ಲಿ ಅರಿಯನ್ ಶೇಖ್ (8), ದಾವೂದ್ ಶೇಖ್ (10), ಅಸಾದುಲ್ ಶೇಖ್ (7), ಸುಭಾನ್ ಶೇಖ್ (11), ಇಮ್ರಾನ್ ಶೇಖ್ (9) ಗಂಭೀರವಾಗಿ ಗಾಯಗೊಂಡ ಮಕ್ಕಳು. ಗಾಯಗೊಂಡ ಅಸ್ದುಲ್‌ನನ್ನು ಜಂಗೀಪುರ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಕೂಗಾಟದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿ ಬಂದ ಗ್ರಾಮಸ್ಥರು ಅವರನ್ನು ತಕ್ಷಣ ಬೆಣಿಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ನಿಜಕ್ಕೂ ಈ ಘಟನೆ ಕೋಲಾಹಲ ಸೃಷ್ಟಿಸಿದೆ. ಸ್ಥಳೀಯ ಮೂಲಗಳ ಪ್ರಕಾರ ಇಂದು ಮಧ್ಯಾಹ್ನ ಮಾವಿನ ತೋಟದಲ್ಲಿ ಹಲವು ಮಕ್ಕಳು ಆಟವಾಡುತ್ತಿದ್ದರು. ಆ ಸಮಯದಲ್ಲಿ, ಒಂದು ಪ್ರತ್ಯೇಕ ಸ್ಥಳದಲ್ಲಿ ಚೆಂಡು ಎಂದು ತಪ್ಪಾಗಿ ಭಾವಿಸಿ, ಅವರು ಬಾಂಬ್ನೊಂದಿಗೆ ಆಟವಾಡಲು ಹೋದರು. ಆಗ ಬಾಂಬ್ ಸ್ಫೋಟಗೊಂಡು ಗಾಯಗೊಂಡ ಘಟನೆ ನಡೆದಿದೆ. ಈ ಘಟನೆ ನಡೆದ ಕೂಡಲೇ ಸುದ್ದಿ ತಿಳಿದ ಫರಕ್ಕಾ ಪೊಲೀಸ್ ಠಾಣೆ ಐಸಿ ದೇಬಬ್ರತ ಚಕ್ರವರ್ತಿ ಹಾಗೂ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಸ್ಥಳಕ್ಕೆ ಬಂದರು. ಈ ಘಟನೆಯ ನಂತರ ಅಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದೆ.
ವಿರೋಧ ಪಕ್ಷಗಳು ಈಗಾಗಲೇ ಚುನಾವಣಾ ಹಿಂಸಾಚಾರದ ಬಗ್ಗೆ ವಿರೋಧ ವ್ಯಕ್ತ ಪಡಿಸಿದೆ. ಈಗಾಗಲೇ ಚುನಾವಣಾ ಹಿಂಸಾಚಾರಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವೆಡೆ ಬಾಂಬ್ ವಶಪಡಿಸಿಕೊಳ್ಳಲಾಗಿದೆ. ಇದೀಗ ಈ ಘಟನೆ ಹಿಂಸಾಚಾರದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
