Udupi : ಉಡುಪಿ (Udupi) ಮಲ್ಪೆಯ (malpe) ಸಮುದ್ರ ತೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಚಿತ್ರ ವಸ್ತುಗಳು ಕಂಡುಬಂದಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ರಾತ್ರಿ ಬೆಳಗಾಗುವುದರೊಳಗೆ ಕಡಲು ಕಸದಂತಿರುವ ರಾಶಿಯನ್ನು ತಂದು ಗುಡ್ಡೆ ಹಾಕಿದೆ. ನೋಡಲು ನಾವು ಆಹಾರವಾಗಿ ಸ್ವೀಕರಿಸುವ ಶಾವಿಗೆಯ ಎಳೆಯಂತೆ ಕಾಣುತ್ತದೆ. ಸ್ಥಳೀಯ ಆಡು ಭಾಷೆಯಲ್ಲಿ ಇದನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಗಂಗೆಯ ಕೂದಲು ದಟ್ಟವಾಗಿ ರಾಶಿ ಬಿದ್ದಿದೆ. ಇದನ್ನು ಕಂಡ ಸ್ಥಳೀಯರು, ಮೀನುಗಾರರು ಆಶ್ಚರ್ಯಗೊಂಡಿದ್ದಾರೆ. ಸದ್ಯ ಈ ಸ್ಥಳಕ್ಕೆ ವಿಜ್ಞಾನಿಗಳು ಭೇಟಿ ನೀಡಿದ್ದು, ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಸಂಶೋಧನೆ ನಡೆಸಿದ ವಿಜ್ಞಾನಿಗಳು (scientist) ಇದು ಸಲೋಪೆನ್ಟ್ ಟ್ಯೂಬ್ ವರ್ಮ್ ಎಂದು ಪತ್ತೆ ಹಚ್ಚಿದ್ದಾರೆ. ಇದೊಂದು ಜೀವಿಯಾಗಿದ್ದು, ಮಲ್ಪೆ ಕಡಲತಡಿಯಲ್ಲಿ ಈ ವಿಚಿತ್ರ ಜೀವಿ ಪತ್ತೆಯಾದ ನಂತರ ಇಲ್ಲಿಗೆ ಮೀನುಗಾರಿಕಾ ಮಹಾವಿದ್ಯಾಲಯದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅವರು ಕೂಡ ಈ ವಿಚಿತ್ರ ವಸ್ತುವನ್ನು ಸಲೋಪೆನ್ಟ್ ಟ್ಯೂಬ್ ವರ್ಮ್ ಖಚಿತಪಡಿಸಿದ್ದಾರೆ.
ಈ ಸಲೋಪೆನ್ಟ್ ಟ್ಯೂಬ್ ವರ್ಮ್ ಈ ಬಾರಿಯ ಬಿಪರ್ ಜಾಯ್ ಚಂಡಮಾರುತದಿಂದ ಕೂಡಲೇ ತೀರಕ್ಕೆ ಬಂದಿದೆ. ಚಂಡಮಾರುತಕ್ಕೆ
ಕಡಲ ನೀರು ಹೆಚ್ಚಾಗಿ, ಅಲೆಗಳು ಅಬ್ಬರಿಸಿದ್ದವು. ಸಮುದ್ರದಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು. ಇದರಿಂದ ಸಮುದ್ರದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಜೀವಿ ಸತ್ತು ರಾಶಿಯಾಗಿ ತೇಲಿ ದಡಕ್ಕೆ ಬಂದಿದೆ ಎನ್ನಲಾಗಿದೆ.
ಸತ್ತ ಈ ಜೀವಿ ಕೊಳೆತು ಗೊಬ್ಬರವಾದರೆ ಹೆಚ್ಚು ಮೀನುಗಳು ಇಲ್ಲಿ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಿನ ಸಂಶೋಧನೆಗಾಗಿ ಇದರ ಸ್ಯಾಂಪಲ್ ಸಂಗ್ರಹಿಸಿ ತಂಡ ತೆರಳಿದೆ. ಇದರ ಬಗ್ಗೆ ಯಾರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಮಲ್ಪೆಯ ಕಡಲತಡಿಯಲ್ಲಿ ಶ್ಯಾವಿಗೆಯಂತೆ ಬಿದ್ದಿದ್ದ ಈ ಪಾಚಿ ಸುಮಾರು ಎರಡು ದಶಕದ ನಂತರ ಕಾಣಿಸಿಕೊಂಡಿತ್ತು. ಅಲ್ಲದೆ, ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಪಣಂಬೂರು ಬೀಚಿನಲ್ಲಿಯೂ ಇಂಥದ್ದೇ ಜೀವಿ ಪತ್ತೆಯಾಗಿತ್ತು. ಇದೀಗ ದಶಕಗಳ ಬಳಿಕ ಗಂಗೆಯ ಕೂದಲು ಮಲ್ಪೆ ಕಡಲತೀರದಲ್ಲಿ ರಾಶಿ ಬಿದ್ದಿದೆ. ನೋಡಲು ಕಲ್ಮಶದಂತೆ ಕಂಡರೂ ಯಾವುದೇ ದುರ್ವಾಸನೆ ಇಲ್ಲ. ಮತ್ತೊಮ್ಮೆ ಅಬ್ಬರದ ಕಡಲಿನ ಅಲೆಗಳು ತೀರ ಪ್ರದೇಶಕ್ಕೆ ಬಂದಾಗ, ಅವು ಈ ಗಂಗೆಯ ಕೂದಲ ರಾಶಿಯನ್ನು ಹೊತ್ತು ಮತ್ತೆ ಕಡಲಿನ ಒಡಲಿಗೆ ಹಾಕುತ್ತದೆ ಎನ್ನುತ್ತಾರೆ.
ಇದನ್ನು ಓದಿ: Gender transition: ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ ಮಾಜಿ ಸಿಎಂ ಮಗಳು !! ‘ಸುಚೇತನಾ’ ಇನ್ನು ಮುಂದೆ ‘ಸುಚೇತನ್’!!
