Kantara-2: ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಜನರ ಮನದಲ್ಲಿ ಅಚ್ಚೊತ್ತಿದೆ. ಇದೀಗ ‘ಕಾಂತಾರ 2’ (kantara-2) ಸಿನಿಮಾ ತೆರೆ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ-2 ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂದೆ ಹೊಸ ಸವಾಲುಗಳು ಇವೆ. ಏನದು?!
ಕಾಂತಾರ ಸೂಪರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಪಾರ್ಟ್-2ನಲ್ಲಿ ನಿರತರಾಗಿದ್ದು, ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಅದ ಬಳಿಕ ಮುಂದಿನ ಭಾಗದ ಬಗ್ಗೆ ದೇಶಾದ್ಯಂತ ಜನರಲ್ಲಿ ಕುತೂಹಲ ನಿರೀಕ್ಷೆ ಹೆಚ್ಚಾಗಿದೆ. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಇತಿಹಾಸ ಸೃಷ್ಟಿಸಿದೆ. ಕಾಂತಾರ ಇದೀಗ ಪಾರ್ಟ್-2 ಮೂಲಕ ಮೋಡಿ ಮಾಡಲು ರೆಡಿಯಾಗುತ್ತಿದೆ.
ಮೊದಲ ಭಾಗಕ್ಕಿಂತ 2ನೇ ಭಾಗವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಸಿನಿಮಾತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಸಿನಿಮಾದ ಮೊದಲ ಭಾಗ ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ಹಿನ್ನೆಲೆ ಕಾಂತಾರ -2 ಬಗ್ಗೆ ಜನರಿಗೆ ಹೆಚ್ಚಿನ ಮಟ್ಟದ ನಿರೀಕ್ಷೆ ಇದೆ. ಹಾಗಾಗಿ ರಿಷಬ್ ಶೆಟ್ರಿಗೆ ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ ಇರೋವಂತೆ ಕಥೆ ಮಾಡಬೇಕು ಅನ್ನುವ ಒತ್ತಡವಿದೆ. ರಿಷಬ್ ಕಠಿಣ ತರಬೇತಿಗಾಗಿ ಸಮಯ ಮೀಸಲಿಟ್ಟಿದ್ದಾರೆ. ಕುದುರೆ ಸವಾರಿ ಕೌಶಲ್ಯ ಮತ್ತು ಜನಪ್ರಿಯ ಕಲೆಯಾದ ಕಳರಿ ಪಯಟ್ಟುಗಳನ್ನು ಕಲಿಯುತ್ತಿದ್ದಾರೆ. ರಿಷಬ್ ಚಿತ್ರ ಸೆಟ್ಟೇರಿರುವ ತನ್ನ ತವರು ಊರಿನಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಕಾಂತಾರ ಪ್ರೀಕ್ವೆಲ್ ಆಗಸ್ಟ್ 27 ರಂದು ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಆದರೆ ಬಿಡುಗಡೆಯ ದಿನಾಂಕ ಅಂತಿಮಗೊಂಡಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಇನ್ನು ಕಾಂತಾರ -2 ಕಾಂತಾರ-1 ಚಿತ್ರದ ಮುನ್ನುಡಿಯಾಗಿ ತೋರಿಸಲಾಗುತ್ತದೆ. ಚಿತ್ರದಲ್ಲಿ ತೋರಿಸಲಾದ ‘ದೇವರ ಹಿನ್ನಲೆ’ಯ ಕಥೆ ಬಗ್ಗೆ ಹೊಸ ನಿರೂಪಣೆ ತರಲಾಗುತ್ತಿದೆ. ಇದಕ್ಕಾಗಿ ಕಥೆಯು ದೊಡ್ಡ ಪ್ರಮಾಣದಲ್ಲಿ ರೂಪುಗೊಳ್ಳುತ್ತಿದೆ ಎಂದು ಮೂಲವು ತಿಳಿಸಿದೆ. ನಿರ್ಮಾಪಕರು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೂ ಇದು ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.
