Food Tips: ಎಳನೀರು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಸುಡುವ ಶಾಖದಿಂದ ಎಳನೀರು ಪರಿಹಾರವನ್ನು ನೀಡುತ್ತದೆ. ಇದು ನಮ್ಮ ದೇಹವನ್ನು ತಂಪಾಗಿಸುವುದಲ್ಲದೇ ನಮ್ಮ ಆರೋಗ್ಯಕ್ಕೆ ಬೇಕಾದ ಅಗತ್ಯ ವಿಟಮಿನ್ ಹಾಗೂ ಪೋಷಕಾಂಶಗಳನ್ನು ನೀಡುತ್ತದೆ. ಇಂತಹ ಅದ್ಭುತ ಆರೋಗ್ಯ ಪ್ರಯೋಜನವನ್ನು ಹೊಂದಿರುವ ಎಳನೀರು (Food Tips) ಬಹುತೇಕ ಎಲ್ಲರಿಗೂ ಇಷ್ಟ.
ಎಳನೀರಿನಲ್ಲಿ ಸೋಡಿಯಂ, ಪೊಟ್ಯಾಸಷಿಯಮ್ ಹೀಗೆ ಅನೇಕ ಪೋಷಕಾಂಶಗಳಿರುವುದರಿಂದ ಪ್ರತಿದಿನ ಕುಡಿಯುವುದರಿಂದ ನಮ್ಮ ದೈನಂದಿನ ಆರೋಗ್ಯಕ್ಕೂ ಒಳ್ಳೆಯದು. ಆದರೆ ಬೀದಿಬದಿಯಲ್ಲಿ ಎಳನೀರನ್ನು ಖರೀದಿಸಲು ಹೋದಾಗಲೆಲ್ಲಾ, ಕೋಮಲ ಮತ್ತು ಅಧಿಕ ನೀರಿರುವ ಕೆನೆಭರಿತ ಸೀಯಾಳವನ್ನು ಪತ್ತೆ ಹಚ್ಚುವುದು ಒಂದು ಸವಾಲಿನ ಸಂಗತಿಯೇ ಸರಿ. ಹಾಗಾಗಿ, ಒಂದು ಸೀಯಾಳವನ್ನು ಖರೀದಿಸಬೇಕಾದರೆ ಅಳೆದು ತೂಗಬೇಕಾಗುತ್ತದೆ. ಪರಿಪೂರ್ಣ ತೆಂಗಿನಕಾಯಿಯನ್ನು ಆಯ್ಕೆ ಮಾಡಲು ಇಲ್ಲಿವೆ ನೋಡಿ ಕೆಲವು ಸುಲಭ ಟಿಪ್ಸ್ ಗಳು.
ಸಿಪ್ಪೆಯನ್ನು ಪರಿಶೀಲಿಸಿ:
ಎಳನೀರನ್ನು ಖರೀದಿಸುವ ಮೊದಲು ನೀವು ಯಾವಾಗಲೂ ಅದರ ಸಿಪ್ಪೆಯನ್ನು ಪರಿಶೀಲಿಸಬೇಕು. ಹಸಿರು ಸಿಪ್ಪೆಯಿಂದ ಕೂಡಿದ ಎಳನೀರು ಕೆನೆಭರಿತ ಮತ್ತು ಅಧಿಕ ನೀರನ್ನು ಹೊಂದಿರುತ್ತದೆ. ಬಣ್ಣ ಕಳೆದುಕೊಂಡಂತೆ ಅಥವಾ ಕಂದು ಬಣ್ಣದಲ್ಲಿ ಕಂಡು ಬಂದರೆ, ಅದು ಉತ್ತಮ ಗುಣಮಟ್ಟದ್ದಲ್ಲ ಎಂಬುದನ್ನು ಸೂಚಿಸುತ್ತದೆ. ನಿಮಗೆ ಸಂಪೂರ್ಣವಾಗಿ ಹಸಿರು ಬಣ್ಣ ಹೊಂದಿರುವ ಸೀಯಾಳವನ್ನು ಹುಡುಕಲು ಸಾಧ್ಯವಾಗದಿದ್ದರೆ, ಕಡಿಮೆ ಪ್ರಮಾಣದ ಬಣ್ಣ ಹೊಂದಿರುವ ಸೀಯಾಳ ಆಯ್ಕೆ ಮಾಡಿ, ಏಕೆಂದರೆ ಅದು ತಾಜಾವಾಗಿರುತ್ತದೆ.
ತೂಕವನ್ನು ಪರಿಶೀಲಿಸಿ:
ಕೆನೆಭರಿತವಾದ ಮತ್ತು ಅಧಿಕ ನೀರಿರುವ ಸೀಯಾಳವು ಸ್ವಾಭಾವಿಕವಾಗಿ ಭಾರವಾಗಿರುತ್ತದೆ. ಅದು ತುಂಬಾ ಹಗುರವಾಗಿದ್ದರೆ, ಅದರೊಳಗೆ ನೀರು ಇಲ್ಲ ಎಂದು ಅರ್ಥ. ಹಾಗಾಗಿ ಅಧಿಕ ಭಾರವಾಗಿರುವ ಸೀಯಾಳವನ್ನು ಖರೀದಿಸಿರಿ.
ಆಕಾರ ಪರಿಶೀಲಿಸಿ:
ತೆಂಗಿನಕಾಯಿಗಳು ತಮ್ಮ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಹೆಚ್ಚು ದುಂಡನೆಯ ಆಕಾರವನ್ನು ಹೊಂದಿರುತ್ತವೆ, ಅಂದರೆ ಅವು ಹೆಚ್ಚಿನ ನೀರನ್ನು ಸಹ ಹೊಂದಿರುತ್ತವೆ. ಬೆಳೆಯುತ್ತಾ ಹೋದಂತೆ ಆಕಾರದಲ್ಲಿ ಉದ್ದವಾಗಲು ಪ್ರಾರಂಭವಾಗುತ್ತದೆ. ಇಂತಹ ಸೀಯಾಳದಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ. ಹಾಗಾಗಿ ಯಾವಾಗಲೂ ದುಂಡಗಿನ ಸೀಯಾಳವನ್ನು ಆರಿಸಿಕೊಳ್ಳುವುದು ಉತ್ತಮ.
ಎಳನೀರಿನ ಕಾಯಿಯನ್ನು ಅಲುಗಾಡಿಸಿ: ತೆಂಗಿನಕಾಯಿಯನ್ನು ನಿಮ್ಮ ಕಿವಿಗೆ ಹತ್ತಿರವಾಗಿ ಹಿಡಿದುಕೊಳ್ಳಿ ಮತ್ತು ಅದನ್ನು ಜೋರಾಗಿ ಅಲ್ಲಾಡಿಸಿ. ಒಳಗಡೆ ನೀರು ಇರುವ ಶಬ್ದ ಕೇಳುತ್ತಿದೆ ಎಂದಾದರೆ, ಅದರಲ್ಲಿ ಅಷ್ಟಾಗಿ ನೀರಿಲ್ಲ ಎಂಬ ಸೂಚನೆ. ಎಳನೀರು ನೀರಿನಿಂದ ತುಂಬಿದ್ದರೆ, ಅದು ಯಾವುದೇ ರೀತಿಯ ಶಬ್ದವನ್ನು ಮಾಡುವುದಿಲ್ಲ.
ಗಾತ್ರ ಪರಿಶೀಲಿಸಿ:
ಸೀಯಾಳ ಖರೀದಿಸುವಾಗ ಗಾತ್ರವು ಚಿಕ್ಕದಿರದಂತೆ ಹಾಗೂ ದೊಡ್ಡದಾಗಿರದಂತೆ ನೋಡಿಕೊಳ್ಳಿ. ಗಾತ್ರದಲ್ಲಿ ದೊಡ್ಡದಾಗಿರುವ ಸೀಯಾಳದಲ್ಲೂ ನೀರಿನಾಂಶ ಕಡಿಮೆ ಇರುತ್ತದೆ. ಆದ್ದರಿಂದ ಯಾವಾಗಲೂ ಮಧ್ಯಮ ಗಾತ್ರದ ಸೀಯಾಳವನ್ನು ಆಯ್ಕೆ ಮಾಡಿರಿ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿರುತ್ತದೆ ಮತ್ತು ಅದು ಕೆನೆಭರಿತವಾಗಿರುತ್ತದೆ.
ಇದನ್ನು ಓದಿ: Bangalore: ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಮೃತ್ಯು ಪ್ರಕರಣ :1100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!
