Mangalore: ಮಂಗಳೂರು: ದೇಶದ ಅತೀ ದೊಡ್ಡ 17 ಮೃಗಾಲಯಗಳ ಪೈಕಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಅಪರೂಪದ ಹುಲಿ, ಕಾಡು, ಶ್ವಾನ, ಕಾಳಿಂಗ, ರಿಯಾ ಜಾತಿಯ ಹಕ್ಕಿಯ ಸಂತಾನಾಭಿವೃದ್ಧಿಯಲ್ಲಿ ಪಿಲಿಕುಳ ಮೃಗಾಲಯ ಹೆಚ್ಚು ಪ್ರಖ್ಯಾತಿ ಪಡೆದಿದೆ.
ದೇಶದ ಹೆಚ್ಚಿನ ಕಡೆಗಳಲ್ಲಿ ಹೆಚ್ಚಿನ ಜೀವಿಗಳು ಅಳಿವಿನ ಅಂಚಿನಲ್ಲಿದ್ದು, ಅದರಲ್ಲಿಯೂ ಕೆಲವು ಜೀವಿಗಳು ಸೂಕ್ತ ಆಹಾರ, ಮೇವು ಇಲ್ಲದೆ ಕಾಡಿನಿಂದ ನಾಡಿನ ಕಡೆಗೆ ಪಯಣ ಬೆಳೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಈ ನಡುವೆ ವನ್ಯ ಜೀವಿಗಳ ಸಂರಕ್ಷಣೆಯ ವಿಚಾರದಲ್ಲಿ ಪಿಲಿಕುಳ ಮೃಗಾಲಯ ತನ್ನದೆ ಆದ ಛಾಪು ಮೂಡಿಸಿದೆ. ನಮ್ಮ ದೇಶದಲ್ಲಿ 164 ಮಾನ್ಯತೆ ಪಡೆದ ಮೃಗಾಲಯವಿದ್ದು, ಅದರಲ್ಲಿ ಒಟ್ಟು ಅತಿ ದೊಡ್ಡ 17 ಮೃಗಾಲಯಗಳು ಇದೆ. ಅದರಲ್ಲಿ ಮಂಗಳೂರಿನ ಪಿಲಿಕುಳ ಕೂಡ ಒಂದಾಗಿದೆ.
ಸುಮಾರು 1,440 ಪ್ರಾಣಿ ಪಕ್ಷಿಗಳು ಈ ಮೃಗಾಲಯದಲ್ಲಿದ್ದು ಇದರ ಜೊತೆಗೆ ಹುಲಿ, ಸಿಂಹ, ಚಿರತೆ, ಕಾಡು ನಾಯಿಗಳು, ಕತ್ತೆಕಿರುಬ, ನರಿಗಳು, ಹಿಪ್ಪೋಗಳು, ಮೊಸಳೆ, ಆಮೆ, ಪಕ್ಷಿಗಳು, ಜಿಂಕೆಗಳು, ಕೃಷ್ಣ ಮೃಗಗಳು , ಮುಂಗುಸಿ, ಕಾಡು ಬೆಕ್ಕುಗಳು, ಬೂದು ತೋಳಗಳು, ಅಳಿಲುಗಳು ಈ ಮೃಗಾಲಯದಲ್ಲಿದೆ. ವಿಶೇಷವಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನಾಭಿವೃದ್ಧಿಗೆ ಪಿಲಿಕುಳ ಹೆಸರುವಾಸಿಯಾಗಿದ್ದು, ಬೇರೆ ಮೃಗಾಲಯದಿಂದ ತರಿಸಲಾದ ಪ್ರಾಣಿ, ಪಕ್ಷಿಗಳು ತನ್ನ ಸಂತಾನಾಭಿವೃದ್ಧಿ ವೃದ್ಧಿಸುತ್ತಿರುವುದು ಮೃಗಾಲಯದ ವಿಶೇಷತೆ. ಹಾವಿನ ಪ್ರಭೇದಗಳ ದೊಡ್ಡ ಸಂಗ್ರಹ ಪಿಲಿಕುಳದಲ್ಲಿದೆ.ಈ ಅಪರೂಪದ ಮತ್ತು ಅತಿ ಹೆಚ್ಚು ಪ್ರಾಣಿಗಳ ಸಂತಾನಾಭಿವೃದ್ಧಿಗೆ ಈ ಪ್ರದೇಶ ಪೂರಕವಾದ ವಾತಾವರಣವನ್ನು ಹೊಂದಿದೆ.
ಪಿಲಿಕುಳ ಮೃಗಾಲಯ ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಡಿಯಿದ್ದು, ಸುಮಾರು ಉದ್ಯಾನ 150 ಎಕರೆ ವ್ಯಾಪ್ತಿಯನ್ನು ಒಳಗೊಂಡಿದೆ. ಹಲವು ವರ್ಷ ಹಿಂದೆಯೇ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪಿಲಿಕುಳದಲ್ಲಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದ್ಧಿ ಪಡಿಸಿದ ಗರಿಮೆಯನ್ನು ಪಿಲಿಕುಳ ಮೃಗಾಲಯ ಪಡೆದುಕೊಂಡಿದೆ.
ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್ ‘ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾಗಿದ್ದು,ಈ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್ ‘ ಕೂಡ ಪಿಲಿಕುಳದಲ್ಲಿ ಸಂತಾನಾಭಿವೃದ್ಧಿ ಯಶಸ್ವಿಯಾಗಿದೆ. ಪಿಲಿಕುಳ ಜೈವಿಕ ಉದ್ಯಾನದಲ್ಲಿ 120ಕ್ಕು ಹೆಚ್ಚು ವಿವಿಧ ವರ್ಗಕ್ಕೆ ಸೇರಿದ ಪ್ರಾಣಿ ಪಕ್ಷಿಗಳಿವೆ. ಇದರಲ್ಲಿ 40 ಪ್ರಾಣಿಪಕ್ಷಿಗಳು ಅಳಿವಿನಂಚಿನಲ್ಲಿರುವ ಜೀವಿಗಳಾಗಿದ್ದು, ಬೇರೆ. ಮೃಗಾಲಯಗಳಿಗೆ ಹೋಲಿಕೆ ಮಾಡಿದರೆ ಹುಲಿ, ಚಿರತೆ, ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಕೊಂಚ ಹೆಚ್ಚು ಎನ್ನಬಹುದು.
ಪಿಲಿಕುಳದಲ್ಲಿ ಒಟ್ಟು 15 ಕಾಳಿಂಗ ಸರ್ಪಗಳಿದ್ದು, ಬೇಡಿಕೆಯ ಆಧಾರದಲ್ಲಿ ಬೇರೆ ಮೃಗಾಲಯಕ್ಕೆ ರವಾನೆ ಕೂಡ ಮಾಡಲಾಗುತ್ತಿದೆ. ಸಂತಾನಾಭಿವೃದ್ಧಿಯ ಸುಮಾರು 175ಕ್ಕೂ ಅಧಿಕ ಕಾಳಿಂಗಗಳನ್ನು ದಟ್ಟಾರಣ್ಯಕ್ಕೆ ಬಿಡಲಾಗಿದ್ದು, 50ಕ್ಕೂ ಅಧಿಕ ಕಾಳಿಂಗ ಬೇರೆ ಮೃಗಾಲಯಕ್ಕೆ ರವಾನೆ ಮಾಡಲಾಗಿದೆ.ಕಾಳಿಂಗ ಸರ್ಪ ವೈಜ್ಞಾನಿಕವಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಈಗಾಗಲೇ 180 ಮರಿಗಳಾಗಿದೆ. ಹೆಚ್ಚುವರಿ ಕಾಳಿಂಗ ಮರಿಗಳನ್ನು ಕಾಡಿಗೆ ಬಿಡಲಾಗಿದೆ. ಈ ಉದ್ಯಾನದಲ್ಲಿ ಇಲ್ಲಿಯವರೆಗೆ ಒಟ್ಟು 15 ಕ್ಕೂ ಅಧಿಕ ಹುಲಿ ಮರಿಗಳು ಜೊತೆಗೆ ಸದ್ಯ 12 ಹುಲಿಗಳಿವೆ. ಉಳಿದವುಗಳನ್ನು ಚೆನ್ನೈ, ರಿಲಯನ್ಸ್, ಬನ್ನೇರುಘಟ್ಟ ಸೇರಿದಂತೆ ಉಳಿದ ಮೃಗಾಲಯದೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.
