New Delhi: ನವದೆಹಲಿ (New Delhi) ರೈಲು ನಿಲ್ದಾಣದಲ್ಲಿ ರೈಲ್ವೆ ಇಲಾಖೆಯ ದೊಡ್ಡ ನಿರ್ಲರ್ಕ್ಷ್ಯದಿಂದಾಗಿ ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ. ಮಹಿಳೆ ತನ್ನ ಕುಟುಂಬದ ಜೊತೆಗೆ ರೈಲು ನಿಲ್ದಾಣಕ್ಕೆ ಬಂದಿದ್ದರು. ಆದರೆ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತುಕೊಂಡಿದೆ. ದಾರಿಯಲ್ಲಿ ನೀರು ಇದ್ದದ್ದನ್ನು ಕಂಡ ಮಹಿಳೆ ವಿದ್ಯುತ್ ಕಂಬದ ಬೆಂಬಲ ಪಡೆಯಲು ಹೋದಾಗ ವಿದ್ಯುತ್ ಶಾಕ್ ತಗುಲಿದೆ. ಕೂಡಲೇ ಸುತ್ತಮುತ್ತಲಿನವರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಈ ಪ್ರಕರಣದ ಕುರಿತು ರೈಲ್ವೆ ಇಲಾಖೆಯ ಜೊತೆಗೆ ಪೊಲೀಸರು ಕೂಡಾ ತನಿಖೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂಬ ಮಹಿಳೆ ಬೆಳಿಗ್ಗೆ 5.30 ರ ಸುಮಾರಿಗೆ ನವದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಮಹಿಳೆಯೊಂದಿಗೆ ಇಬ್ಬರು ಮಹಿಳೆಯರು ಮತ್ತು 3 ಮಕ್ಕಳು ಇದ್ದರು. ಸಾಕ್ಷಿ ಶತಾಬ್ದಿ ರೈಲಿನಲ್ಲಿ ಭೋಪಾಲ್ ಗೆ ಹೋಗಬೇಕಿತ್ತು. ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದ ನಿಲ್ದಾಣದ ಸುತ್ತಮುತ್ತ ನೀರು ತುಂಬಿಕೊಂಡಿದೆ. ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ನೀರು ತಪ್ಪಿಸಲು ಮಹಿಳೆ ವಿದ್ಯುತ್ ಕಂಬ ಹಿಡಿದುಕೊಂಡಿದ್ದಾಳೆ. ಈ ವೇಳೆ ಮಹಿಳೆಗೆ ಬಲವಾದ ವಿದ್ಯುತ್ ಶಾಕ್ ತಗುಲಿ ಮಹಿಳೆ ಕೆಳಗೆ ಬಿದ್ದಿದ್ದಾಳೆ. ಇದನ್ನು ಕಂಡ ಸುತ್ತಮುತ್ತಲಿನವರು ಮಹಿಳೆಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ ಜನರು ಮಹಿಳೆಯನ್ನು ಪಿಲ್ಲರ್‌ನಿಂದ ಬೇರ್ಪಡಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಆದರೆ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಕಂಬದ ಮೇಲೆ ವಿದ್ಯುತ್ ತಂತಿಗಳು ತೆರೆದುಕೊಂಡಿದ್ದು, ಇದರಿಂದ ಕಂಬದಲ್ಲಿ ಕರೆಂಟ್ ಬಂದಿದೆ ಎಂದು ಹೇಳಲಾಗುತ್ತಿದೆ. ಮಹಿಳೆ ಹೊರಗೆ ಬರುತ್ತಿದ್ದಾಗ ಕಂಬವನ್ನು ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗುಲಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಯಾರ ನಿರ್ಲಕ್ಷ್ಯ ಎಂಬ ಬಗ್ಗೆ ರೈಲ್ವೇ ಸೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ಮೇರೆಗೆ ವಿಧಿವಿಜ್ಞಾನ ತಂಡ ಕೂಡ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಮೃತ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಈ ವೇಳೆ ಮೃತರ ಸಹೋದರಿ ಮಾಧವಿ ರವರು ನಿರ್ಲಕ್ಷ್ಯದ ಆರೋಪದ ಮೇಲೆ ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 287/304ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಕ್ರೈಂ ತಂಡ ಹಾಗೂ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿದೆ.
ಮಳೆಯ ಕಾರಣ ನೀರು ಶೇಖರಣೆಯಾಗಿ ವಿದ್ಯುತ್ ಸ್ಪರ್ಶದಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ದೀಪಕ್ ಕುಮಾರ್ ಹೇಳಿದ್ದಾರೆ. ಇನ್ನು ಮುಂದೆ ಇಂತಹ ಅವಘಡ ಸಂಭವಿಸದಂತೆ ದೆಹಲಿ ವಿಭಾಗದಲ್ಲಿ ಎಲೆಕ್ಟ್ರಿಕಲ್ ಸೇಫ್ಟಿ ಡ್ರೈವ್ ಆರಂಭಿಸಲಾಗಿದೆ.
ಇದನ್ನೂ ಓದಿ: 30 ನಿಮಿಷದಲ್ಲಿ 23 ಕಪಾಳಮೋಕ್ಷ… 4ನೇ ತರಗತಿಯಲ್ಲಿ ಓದುತ್ತಿದ್ದ ಮಗುವಿಗೆ ಶಿಕ್ಷಕರಿಂದ ಅಮಾನುಷ ಥಳಿತ! ಪ್ರಕರಣ ದಾಖಲು
