Belthangadi: ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈಗಾಗಲೇ ಅನೇಕ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ, ಈ ತನಿಖೆಯ ಭಾಗವಾಗಿ ಜೂನ್ 27 ರಂದು ಕೊಡಗು ಮತ್ತು ಬೆಳ್ತಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ, ಆ ದಾಳಿ ಕುರಿತಾಗಿ ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಬಿಜೆಪಿ ಸರ್ಕಾರ ಎನ್ಐಎಗೆ ವಹಿಸಿತ್ತು. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿರುವ ನಿಷೇಧಿತ ಪಿಎಫ್ಐ (PFI) ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಎನ್‌ಐಎ (NIA) ಅಧಿಕಾರಿಗಳು ಜೂನ್ 27 ರಂದು ದಾಳಿ ನಡೆಸಿದ್ದರು.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಕಾರು ಚಾಲಕ ನೌಷದ್ ಎಂಬಾತನ ಮನೆ ಮೇಲೆ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭ ನೌಷದ್ ಎಂಬ ಆರೋಪಿ ಮನೆಯಲ್ಲಿರಲಿಲ್ಲ. ಹೀಗಾಗಿ, ಅಧಿಕಾರಿಗಳು ಎನ್.ಐ.ಎ ಕಚೇರಿಗೆ ನೌಷದ್ ಗೆ ನೋಟಿಸ್ ನೀಡಿ ಅಲ್ಲಿಂದ ತೆರಳಿದ್ದಾರೆ.
ನೆಟ್ಟಾರು ಕೊಲೆ ಕೇಸ್ನಲ್ಲಿ ಇದುವರೆಗೆ 21 ಆರೋಪಿಗಳನ್ನು ಎನ್‌ಐಎ ಬಂಧಿಸಿ, ಆರೋಪಿಗಳ ವಿರುದ್ದ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಇದರ ಬಳಿಕ ಮತ್ತೆ ಇಬ್ಬರು ಅರೋಪಿಗಳಾದ ತುಫೈಲ್ ಎಂ ಹೆಚ್ ಮತ್ತು ಮಹಮ್ಮದ್ ಜಬೀರ್ ವಿರುದ್ದ ಪೂರಕ ಚಾರ್ಜ್ರ್ಶೀಟ್ ಅನ್ನು ಎನ್ ಐ ಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದೆ. ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಶೋಧ ಮುಂದವರಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರ ಹೊರತಾಗಿ ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ವಿವಿಧ ಅಡಗುತಾಣಗಳಲ್ಲಿ ಮೂವರೂ ಆರೋಪಿಗಳು ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ ಪ್ರಮುಖ ಹಂತಕರಿಗೆ ಆಶ್ರಯ ನೀಡಿರುವ ಜೊತೆಗೆ ತಲೆಮರೆಸಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ ಎಂಬ ಅನುಮಾನ ಭುಗಿಲೆದ್ದಿದೆ. ಇದೀಗ ಮೊನ್ನೆಯಷ್ಟೇ ಎನ್.ಐ.ಎ ಅಧಿಕಾರಿಗಳು ಬೆಳ್ತಂಗಡಿಯ ವೃತ್ತಿಯಲ್ಲಿ ಕಾರು ಚಾಲಕನಾಗಿರುವ ನೌಷದ್(30) ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಮೊನ್ನೆ ದಾಳಿ ನಡೆಸಿದ ವೇಳೆ ಆರೋಪಿ ಮನೆಯಲ್ಲಿ ಇರದ ಹಿನ್ನೆಲೆಯಲ್ಲಿ, ನೌಷದ್ ಮನೆಯವರ ಕೈಗೆ ನೌಷದ್ ಖುದ್ದು ಬೆಂಗಳೂರು ಎನ್‌ಐಎ ಕಚೇರಿಗೆ ಬಂದು ತನಿಖೆಗೆ ಹಾಜರಾಗಲು ನೋಟಿಸ್ ನೀಡಿ ಹೋಗಿದ್ದಾರೆ. ಜೂನ್ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೌಷದ್ ಮತ್ತು ಕೊಡಗು ಜಿಲ್ಲೆಯ ಅಬ್ದುಲ್ ನಾಸಿರ್, ಅಬ್ದುಲ್ ರೆಹಮಾನ್ ಮನೆ ಮೇಲೆ ಮೂರು ಕಡೆಗಳಲ್ಲಿ ಬೆಂಗಳೂರು ವಿಭಾಗದ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ ಬಳಿಕ ಕೆಲವು ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
