Ragi ball eating competition: ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಸರ್ಜಾಪುರದ ಖಾಸಗಿ ಹೋಟೆಲ್ ಮಂಥನ ಮತ್ತು ಸ್ಥಳೀಯರ ವತಿಯಿಂದ ರಾಗಿ ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು (Ragi ball eating competition). ಆ ಸ್ಪರ್ಧೆಗೆ ಭರ್ಜರಿ ಸ್ಪಂದನೆ ಬಂದಿದ್ದು, ಬಕಾಸುರ ಹೊಟ್ಟೆಯ ಬಲಿಷ್ಠ ಯುವಕರು ತಮ್ಮ ಊಟದ ಪ್ರತಿಭೆ ಮೆರೆದಿದ್ದಾರೆ ! ಈ ವಿಶೇಷ ಸ್ಪರ್ಧೆಯಲ್ಲಿ 70 ವರ್ಷದ ಶ್ರೀನಿವಾಸ್ ಬರೋಬ್ಬರಿ 250 ಗ್ರಾಂ ತೂಕದ 12 ಮುದ್ದೆಗಳನ್ನು ಅಂದರೆ 3 ಕಿಲೋ ಮುದ್ದೆ ಮಡಚಿ ಬಾಯಿಗಿಟ್ಟು ಡರ್ರನೆ ತೇಗಿದ್ದಲ್ಲದೆ ರನ್ನರ್ ಆಗಿದ್ದು, ಅದು ಯುವ ಜನತೆಯ ಹುಬ್ಬೇರಿಸಿ ನಾಚಿಕೆಪಟ್ಟುಕೊಳ್ಳುವಂತೆ ಮಾಡಿದ್ದಾರೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದ ಮಂಥನ ಹೋಟೆಲ್ ಅವರಣದಲ್ಲಿ ನಡೆದ ನಾಟಿ ಕೋಳಿ ಮುದ್ದೆ ಊಟ ಸ್ಪರ್ಧೆಯನ್ನು ಸ್ಥಳೀಯ ಮಹೇಶ್ ಮತ್ತು ಕೆಎನ್ ಪ್ರಿಂಟರ್ಸ್ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿತ್ತು.
ಅಲ್ಲಿ ಸ್ಪರ್ಧಿಗಳು ನಾಟಿ ಕೋಳಿ ಜತೆ ಮುದ್ದೆ ಮುರಿದು ತಿನ್ನುವ ಸ್ಪರ್ಧೆಗೆ ಬಂದವರು ಒಂದೊಂದೇ ರಾಗಿ ಮುದ್ದೆಯನ್ನು (Ragi Ball) ಗುಳುಂ ಗುಳುಂ ಅಂತ ತಲೆ ಬಗ್ಗಿಸಿ ನಿರಂತರವಾಗಿ ತಿನ್ನುತ್ತಲೇ ಇದ್ದರು. ಒಬ್ಬರು ಇನ್ನೊಬ್ಬರಿಗಿಂತ ವೇಗವಾಗಿ ರಾಗಿ ಮುದ್ದೆ ನಾಟಿ ಕೋಳಿ ಸಾರನ್ನು ರುಚಿ ಸವಿಯುತ್ತಾ ತಿಂದಿದ್ದಾರೆ.

Image source: News18 kannada
ವಿಜೇತರಿಗೆ ಮೊದಲ ಬಹುಮಾನ ಕುರಿ:
ನಾಟಿ ಕೋಳಿಯ ಜೊತೆ ರಾಗಿಮುದ್ದೆ ಬಾರಿಸುವ ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನವಾಗಿ ಒಂದು ಕುರಿ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ನಾಟಿ ಕೋಳಿ ಕೊಡುವುದಾಗಿ ಘೋಷಣೆ ಮಾಡಲಾಗಿತ್ತು. ಸ್ಪರ್ಧಾಳುಗಳಿಗೆ 200 ರೂಪಾಯಿ ಎಂಟ್ರಿ ಫೀಸ್ ಇಡಲಾಗಿತ್ತು.
ಈ ದೇಶೀಯ ವಿಶಿಷ್ಟ ಸ್ಪರ್ಧೆಗೆ 200 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದು, ಭಲೇ ಬ್ಯಾಟಿಂಗ್ ಮಾಡಬಲ್ಲ ಗಟ್ಟಿ ಜೀರ್ಣಶಕ್ತಿಯ 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. ಸ್ಪರ್ಧೆಗೆ 30 ನಿಮಿಷದವರೆಗೂ ಟೈಂ ನಿಗದಿಪಡಿಸಿದ್ದು, ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ವಿಜೇತರು ಎಂದು ಘೋಷಿಸಲಾಗಿತ್ತು. ಸ್ಪರ್ಧೆಯಲ್ಲಿ ತಿನ್ನಲು ಕುಳಿತವರ ಮುಂದೆ ಮೊದಲು ತಲಾ ಕಾಲು ಕೆಜಿ ತೂಕದ 2 ಮುದ್ದೆಗಳನ್ನು ಇಡಲಾಯ್ತು. ಅದನ್ನು ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡುತ್ತಾ ಬರಲಾಯಿತು.
13 ಮುದ್ದೆ ಬಾರಿಸಿ ಗೆದ್ದ ವ್ಯಕ್ತಿ, 12 ಮುದ್ದೆ ಬಡಿದು ಹಾಕಿದ 70 ರ ವೃದ್ದ !:
ಅಲ್ಲಿ ಭೀಮ- ಊಟ ಮಾಡಲು ಕುಳಿತ ಕೆಲವರು ಮೂರೇ ಮುದ್ದೆಗೆ ಏದುಸಿರು ಬಿಟ್ಟು ಎದ್ದು ನಡೆದಿದ್ದರು. ಆದ್ರೆ ಮತ್ತೆ ಕೆಲವರು ಏಳೆಂಟು ಮುದ್ದೆ ಮುರಿದು ಸಣ್ಣ ಮಟ್ಟದ ಸ್ಪರ್ಧೆ ಒಡ್ಡಿದ್ದರು. ಆದ್ರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ, ಮಹಾ ಹಸಿವಿನ ಹರೀಶ್ ಅನ್ನೋರು ಮಾತ್ರ ಬರೋಬ್ಬರಿ 13 ಮುದ್ದೆ ಮುರಿದು ಛಿದ್ರ ಮಾಡಿ ಗೆದ್ದು ಬೀಗಿದ್ದಾರೆ. 13 ಮುದ್ದೆ ಊಟ ಮಾಡಿ ಮೊದಲನೇ ಬಹುಮಾನದ ಕುರಿಯನ್ನು ಬೆನ್ನ ಮೇಲೆ ಹಾಕಿಕೊಂಡು ಸೀದಾ ತನ್ನೂರಿಗೆ ನಡೆದಿದ್ದಾರೆ !
ಎರಡನೇ ಬಹುಮಾನವನ್ನು 70 ವರ್ಷ ಪ್ರಾಯದ ಶ್ರೀನಿವಾಸ್ ಎಂಬುವವರು ಹಾಗೂ ಮೂರನೇ ಪ್ರೈಸ್ ಅನ್ನು ಆನಂದ್ ಎಂಬುವವರು ಪಡೆದುಕೊಂಡರು.
ಈ ಭರ್ಜರಿ ಮುದ್ದೆ ಜತೆ ಬಾಡೂಟದ ಸ್ಪರ್ಧೆ ನೋಡಲೆಂದು ಸರ್ಜಾಪುರ ಒಂದೇ ಅಲ್ಲದೇ, ಸುತ್ತಮುತ್ತಲ ಹಲವು ಊರುಗಳಿಂದಲೂ ನೂರಾರು ಜನರು ಆಗಮಿಸಿದ್ದರು. ಇತ್ತೀಚೆಗೆ ನಮ್ಮ ದೇಶೀಯ ಅಹಾರ ಪದ್ಧತಿ ಹೀಗಾಗಿ ನಮ್ಮ ಹಳ್ಳಿ ಸೊಗಡಿನ ಆರೋಗ್ಯಕರವಾದ ರಾಗಿ ಮುದ್ದೆಯ ರುಚಿಯನ್ನ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಮ್ಮೆ ಪರಿಚಯಿಸುವ ಉದ್ದೇಶದಿಂದ ನಡೆದ ಈ ಸ್ಪರ್ಧೆ ರಾಜ್ಯದಾದ್ಯಂತ ಗಮನ ಸೆಳೆದಿದೆ. ಈ ಹಿಂದೆ ಕೂಡ ಕರ್ನಾಟಕದ ಹಲವು ಭಾಗಗಳಲ್ಲಿ ಬಾರಿ ಮುದ್ದೆ ನಾಟಿ ಕೋಳಿ ಸಾರು ಸ್ಪರ್ಧೆ ಏರ್ಪಟ್ಟಿದ್ದು, ಅದರಲ್ಲಿ ಸತತ ಒಂಬತ್ತು ಬಾರಿ ಮೀಸೆ ಈರೇಗೌಡ ಎಂಬ ವ್ಯಕ್ತಿ ಹದಿನೈದು ನಿಮಿಷಗಳಲ್ಲಿ ಮೂರುವರೆ ಕೆಜಿ ಮುದ್ದೆ ತಿಂದು ಗೆದ್ದಿದ್ದರು. ಈ ಸಾರಿ ಮೀಸೆ ಈರೇಗೌಡ ಸ್ಪರ್ಧಿಸಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜಾಲತಾಣದಲ್ಲಿ ವೈರಲ್ ಆಯ್ತೊಂದು ಬ್ಯಾಂಕ್ ಸ್ಲಿಪ್ !! ಇದ್ರಲ್ಲಿ ಬರೆದದ್ದೇನೆಂದು ನಿವಾದ್ರೂ ಹೇಳ್ತೀರಾ?
