State Government: ಆರೆಸ್ಸೆಸ್‌ಗೆ ಸೇರಿದ ಜನಸೇವಾ ಟ್ರಸ್ಟ್‌ಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ತಾವರೆಕೆರೆ ಹೋಬಳಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ 35 ಎಕರೆ 33 ಗುಂಟೆ ಗೋಮಾಳ ಜಮೀನು ನೀಡಿತ್ತು. ಸದ್ಯ RSS ಗೋಮಾಳಕ್ಕೆ ಕೊಟ್ಟ 35 ಎಕರೆ ಭೂಮಿಯನ್ನು ಇದೀಗ ಸಿದ್ದರಾಮಯ್ಯ ಸರ್ಕಾರ ತಡೆ ಹಿಡಿದಿದೆ. ಈ ಹಿನ್ನೆಲೆ ಸರ್ಕಾರದ (State Government) ರೈತ ವಿರೋಧಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗೋಮಾಳವು ಜಾನುವಾರುಗಳ ಮೇವಿಗಾಗಿ ಮೀಸಲಿರಿಸಿದ ಸರ್ಕಾರಿ ಭೂಮಿಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಗೋಮಾಳ ಭೂಮಿಯನ್ನು ಬಿಜೆಪಿ ಸರ್ಕಾರ ಜನಸೇವಾ ಟ್ರಸ್ಟ್‌ಗೆ ನೀಡಿತ್ತು. ಆದರೆ, ಇದೀಗ ಸಿದ್ದರಾಮಯ್ಯ ಸರ್ಕಾರ ಅದನ್ನು ತಡೆ ಹಿಡಿದಿದೆ.
ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜನಸೇವಾ ಟ್ರಸ್ಟ್‌ಗೆ 35 ಎಕರೆ 33 ಗುಂಟೆ ಮಂಜೂರು ಮಾಡುವುದನ್ನು ತಡೆಹಿಡಿಯಲಾಗಿದೆ. ಮುಖ್ಯಮಂತ್ರಿ ನೀಡಿರುವ ಈ ಸೂಚನೆ ಕೇವಲ ಜನಸೇವಾ ಟ್ರಸ್ಟ್‌ಗೆ ಮಾತ್ರ ಅನ್ವಯಿಸುವುದಿಲ್ಲ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮಾಡಿದ್ದ ಎಲ್ಲ ಜಮೀನು ಹಂಚಿಕೆಗಳಿಗೂ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ತರಾತುರಿಯಲ್ಲಿ ಜಮೀನು ಮಂಜೂರು ಮಾಡಿರುವ ಎಲ್ಲ ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ. ಅರ್ಹತೆ ಮತ್ತು ಉದ್ದೇಶದ ಆಧಾರದಲ್ಲಿ ಭೂಮಿ ಮಂಜೂರಾತಿಯನ್ನು ಪರಿಶೀಲಿಸುತ್ತೇವೆ. ಗೋಶಾಲೆಯ ಉದ್ದೇಶಕ್ಕಾಗಿ ಒಂದು ಲಾಭರಹಿತ ಸಂಸ್ಥೆಗೆ 35 ಎಕರೆ ಜಮೀನು ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನೂ ನೋಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಭೂಕಂದಾಯ ನಿಯಮಗಳ ಪ್ರಕಾರ ಪ್ರತಿ 100 ಜಾನುವಾರುಗಳಿಗೆ 30 ಎಕರೆಯನ್ನು ಗೋಮಾಳಕ್ಕೆ ಮೀಸಲಿಡಬೇಕು. ಜಿಲ್ಲಾಧಿಕಾರಿಗಳ ಪೂರ್ವಾನುಮತಿಯ ಬಳಿಕ ಮಾತ್ರ ಗೋಮಾಳ ಭೂಮಿ ಕಡಿಮೆ ಮಾಡಬಹುದು. ವಿವಿಧ ಹೈಕೋರ್ಟ್‌ಗಳು ಗೋಮಾಳ ಭೂಮಿ ಹಂಚಿಕೆ ಮಾಡದಂತೆ ಸರ್ಕಾರಕ್ಕೆ ಸೂಚಿಸಿರುವುದನ್ನು ಸಿಎಜಿ ಎತ್ತಿ ತೋರಿಸಿತ್ತು. ಆದರೆ, ನಗರ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಗೋಮಾಳ ಭೂಮಿಯನ್ನು ಮಂಜೂರು ಮಾಡಲು 2008ರ ಜನವರಿಯಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿತ್ತು. ಗೋಮಾಳ ಜಮೀನು ಹಂಚಿಕೆಗೆ ಮಹಾಲೇಖಪಾಲರು (ಸಿಎಜಿ) 2018ರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಬಿಜೆಪಿ ಅಧಿಕಾರದ ಅವಧಿಯಲ್ಲಿ (2019-2022) ವಿವಿಧ ಸಂಘ ಸಂಸ್ಥೆಗಳಿಗೆ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 252 ಎಕರೆ 36 ಗುಂಟೆ ಗೋಮಾಳ ಭೂಮಿಯನ್ನು ಮಂಜೂರು ಮಾಡಿತ್ತು. ಅದರಲ್ಲಿ ಆದಿಚುಂಚುನಗಿರಿ ಮಠ, ಸಿದ್ಧಗಂಗಾ ಮಠ, ಇಸ್ಕಾನ್, ರಾಷ್ಟೋತ್ಥಾನ ಪರಿಷತ್, ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್, ಒಕ್ಕಲಿಗರ ಸಂಘ ಮತ್ತು ಇತರರಿಗೆ ಮಂಜೂರಾದ ಗೋಮಾಳ ಭೂಮಿ ಸೇರಿದೆ.
