ಕಾಂಗ್ರೆಸ್ (Congress) ಪಕ್ಷ ಕರ್ನಾಟಕದ ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಯಾದ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ದಿನೇ ದಿನೇ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೂವರೆಗೂ 17 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಈ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Veerendra Hegde)ಅವರು ಶಕ್ತಿ ಯೋಜನೆ ಜಾರಿ ಮಾಡಿದಕ್ಕಾಗಿ ಸಿಎಂ ಸಿದ್ದರಾಮಯ್ಯನ (Siddaramaiah) ವರಿಗೆ ಅಭಿನಂದನೆ ಸಲ್ಲಿಸಿ, ಧರ್ಮಸ್ಥಳಕ್ಕೆ ಬನ್ನಿ ಎಂದು ಆಹ್ವಾನವನ್ನೂ ನೀಡಿದ್ದಾರೆ.
ಹೌದು, ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಮಹಿಳೆಯರು ಶಕ್ತಿ ದುಡ್ಡು ಎರಡನ್ನೂ ವ್ಯಯ ಮಾಡದೇ ರೆಸ್ಪಾನ್ಸ್ ನೀಡುತ್ತಿದ್ದಾರೆ. ಅವರು ಉಚಿತವಾಗಿ ಪ್ರಯಾಣ ಬೆಳೆಸುತ್ತಿರುವುದೇ ನಾಡಿನ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಕೂಡ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳಕ್ಕೆ(Dharmastala) ಹೆಚ್ಚಿನ ಮಹಿಳೆಯರು ಹೋಗುತ್ತಿದ್ದಾರೆಂಬುದು ವಿಶೇಷ. ದಿನಂಪ್ರತಿ ಧರ್ಮಸ್ಥಳ ಮಹಿಳೆಯರಿಂದ ಗಿಜಿಗುಡುತ್ತಿರುವುದೇ ಇದಕ್ಕೆ ಸಾಕ್ಷಿ. ಇದರಿಂದ ಧರ್ಮಸ್ಥಳದ ಖಜಾನೆಯೂ ತುಂಬಿ ತುಳುಕುತ್ತಿದೆ. ಅಲ್ಲಿನ ಆಡಳಿತಗಾರರ ಮೊಗದಲ್ಲೂ ಮಂದಹಾಸದ ಕಳೆ ಮೂಡಿದೆ. ಇದಕ್ಕೆ ಸಾಕ್ಷಿ ಮತ್ತು ಕೃತಜ್ಞತೆ ಎಂಬಂತೆ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಶಕ್ತಿ ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆ ತಿಳಿಸಿ ಪತ್ರ ಬರೆದು, ಧರ್ಮಸ್ಥಳಕ್ಕೆ ಬನ್ನಿ ಎಂದು ಆಹ್ವಾನವನ್ನೂ ನೀಡಿದ್ದಾರೆ.
ರಾಜ್ಯದ ಮಹಿಳೆಯರಿಗೆ ‘ಶಕ್ತಿ ಯೋಜನೆ'(Shakthi yojane) ಜಾರಿಗೊಳಿಸಿದ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ(Manjunatha swamy) ದರ್ಶನಕ್ಕೆ ಬರುವಂತೆ ಆಹ್ವಾನ ನೀಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ‘ಶಕ್ತಿ ಯೋಜನೆ’ ಯಿಂದ ಧರ್ಮಸ್ಥಳಕ್ಕೆ ಬರುವ ಮಹಿಳೆಯ ಪ್ರಮಾಣ ಹೆಚ್ಚಾಗಿದೆ. ಮಂಜುನಾಥ ಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಕಾಣಿಕೆ ಹಾಕುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅವಕಾಶ ಇದ್ದಾಗ ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಿ ಎಂದು ಹೇಳಿದ್ದಾರೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಅಂದ್ರೆ, ಹೆಗ್ಗಡೆಯವರು ಧರ್ಮಸ್ಥಳದ ಖಜಾನೆ ಭರ್ತಿಯಾಗುತ್ತಿದೆ ಎಂಬ ಖುಷಿಯಲ್ಲಿ, ಹಿಂದೆ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಬಂದು ಹೋದ ಬಳಿಕ ಆದ ಆವಾಂತರಗಳ ಹಳೆಯ ಸಂದರ್ಭಗಳನ್ನೆಲ್ಲ ಮರೆತು ಬಿಟ್ಟರೇ? ಎಂಬುದು. ಹೌದು, ಈ ಹಿಂದೆಯೂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗ, ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಾಗ ಮೀನು ತಿಂದು ಬಂದಿದ್ದರು ಎಂಬ ಸುದ್ದಿ ಇಡೀ ರಾಜ್ಯದ್ಯಂತ ಚರ್ಚೆಗೆ ಕಾರಣವಾಗಿತ್ತು. ಇಡೀ ನಾಡಿನ ಜನ ಆರಾಧಿಸಿ, ಪೂಜಿಸುವ ದೇವರಿರುವ ಸ್ಥಾನಕ್ಕೆ ರಾಜ್ಯದ ಮುಖ್ಯಮಂತ್ರಿ ಮಾಂಸ ತಿಂದು ಹೋಗುತ್ತಾರೆಂದರೆ ಎಷ್ಟರ ಮಟ್ಟಿಗೆ ಸರಿ? ಯಾರು ಇದನ್ನು ಒಪ್ಪುತ್ತಾರೆ? ಎಂದೆಲ್ಲಾ ವಾದ ವಿವಾದಗಳು ಗರಿಗೆದರಿದ್ದವು. ಸಿದ್ದರಾಮಯ್ಯ ಕೂಡ ನಾನು ತಿಂದಿಲ್ಲ, ಒಳಗೆ ಹೋಗಿಲ್ಲ ಎಂದೆಲ್ಲಾ ಸಮಜಾಯಿಷಿ ಕೊಟ್ಟಿದ್ದರು. ಕೊನೆಗೆ, ‘ ಮೀನು ತಿಂದು ಹೋಗಬಾರದು ಎಂದು ಎಲ್ಲೂ ಹೇಳಿಲ್ಲ ‘ ಎಂದು ತಮ್ಮ ಎಂದಿನ ಉಡಾಫೆಯ ಮಾತಾಡಿದ್ದರು. ಆಗ ಹೆಗಡೆಯವರು ಕೂಡ ಅವರವರ ಇಚ್ಛೆಗೆ ಬಿಟ್ಟಿದ್ದು, ದೇವರಿದ್ದಾನೆ ಎಂದಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಧರ್ಮಸ್ಥಳದ ಕಡೆಗೆ ತಲೆ ಹಾಕಿ ಕೂಡ ಮಲಗಿರಲಿಲ್ಲ.
ಕ್ಷೇತದಲ್ಲಿ ಇಷ್ಟೆಲ್ಲಾ ಆದರೂ ಹೆಗ್ಗಡೆಯವರು ಅದನ್ನೆಲ್ಲಾ ಮರೆತು ಇಂದು ಸಿದ್ದರಾಮಯ್ಯನವರಿಗೆ ಆಹ್ವಾನ ಇತ್ತರೇ? ಒಂದೇ ಒಂದು ಪತ್ರದ ಮೂಲಕ ಸಾವಿರಾರು ಭಕ್ತರ ನಂಬಿಕೆಗೆ ದ್ರೋಹ ಬಗೆದರೆ? ರಾಜ್ಯದಲ್ಲಿ ಇದುವರೆಗೂ ಬಂದ ಹಲವು ಸರಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಯಾವುದನ್ನೂ ಬಹಿರಂಗವಾಗಿ ಶ್ಲಾಘಿಸದ ಹೆಗ್ಗಡೆಯವರು ಇಂದು ಕ್ಷೇತ್ರದ ಬೊಕ್ಕಸ ತುಂಬುತ್ತಿರುವುದಕ್ಕೆ ಖುಷಿ ಪಟ್ಟರೆ? ಮಹಿಳೆಯರಿಂದಲೇ ಕ್ಷೇತ್ರದ ತುಂಬುತ್ತಿದೆ ಎಂದು ಬಗೆದರೆ? ಮೇಲೆ ಕುಳಿತವರು ಸ್ವಾರ್ಥಿಗಳಾದರೆ? ಎಂಬ ಪ್ರಶ್ನೆಗಳೆಲ್ಲ ಮೂಡುವಂತೆ ಮಾಡಿದ್ದಾರೆ.

ಪತ್ರ ಬರೆದದ್ದು ತಪ್ಪಲ್ಲ. ಆದರೆ ಶಕ್ತಿ ಯೋಜನೆಯಿಂದ ನಾಡಿನ ಮಹಿಳೆಯರಿಗೆ ಅನುಕೂಲವಾಗಿದೆ. ಅನೇಕ ಕಾರ್ಮಿಕರು ಇಂದು ಬಸ್ ಹತ್ತಿ ಪ್ರಯಾಣಿಸುವಂತಾಗಿದೆ. ಕೆಳ ವರ್ಗದ ಜನರಿಗೂ ಅನುಕೂಲವಾಗಿದೆ. ರಾಜ್ಯ ಸರ್ಕಾರ ಈ ರೀತಿ ಬಡವರಿಗೆ ನೆರವಾಗಿರೋದು ಅಭಿನಂದನೆ. ಆದರೆ ಇದರೊಂದಿಗೆ ಆಟೋ ಹಾಗೂ ಕ್ಯಾಬ್ ಡ್ರೈವರ್ ಗಳಿಗೆ, ಖಾಸಗೀ ಬಸ್ ನವರಿಗೆ ನಷ್ಟವಾಗಿದೆ. ಸರ್ಕಾರ ಅವರಿಗೂ ಪರಿಹಾರ ನೀಡಲಿ ಎಂದು ಬರೆದಿದ್ದರೆ ಆ ಪತ್ರಕ್ಕೆ ಒಂದು ತೂಕ ಬರುತ್ತಿತ್ತು. ಅದು ಬಿಟ್ಟು ಸರ್ಕಾರ ತಂದಿರುವ ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಜನ ಬರ್ತಿದ್ದಾರೆ, ಕಾಣಿಕೆ ಹಾಕುತ್ತಿದ್ದಾರೆ ಎಂದು ಬರೆದದ್ದು ಸಮಂಜಸವಲ್ಲ ಎಂಬಂತೆ ತೋರುತ್ತಿದೆ. ಫ್ರೀ ಬಸ್ ಮಾಡಿ, ಪರೋಕ್ಷವಾಗಿ ಕ್ಷೇತ್ರದ ಖಜಾನೆ ತುಂಬಿಸಿದ ಸಿಎಂಗೆ ಧನ್ಯವಾದ ಹೇಳುತ್ತಿದ್ದೇವೆ ಎನ್ನುವ ರೀತಿಯಲ್ಲಿದೆ ಆ ಪತ್ರ. ಅದೂ ಅಲ್ಲದೆ ಮಾಂಸ ತಿಂದು ದೇವಸ್ಥಾನ ಹೊಕ್ಕ- ಅದೂ ನಾಸ್ತಿಕರನ್ನು ವಿಶೇಷವಾಗಿ ಪತ್ರ ಬರೆದು ‘ ದೇವಸ್ಥಾನಕ್ಕೆ ಬನ್ನಿ’ ಎಂದು ಕರೆದದ್ದೂ ವಿಪರ್ಯಾಸ !
ಎಲ್ಲಕ್ಕಿಂತ ಮುಖ್ಯವಾಗಿ ಮೊನ್ನೆ ಮೊನ್ನೆ ತಾನೇ ನಾಡಿನ ಜನರೆಲ್ಲರೂ ಬೆಚ್ಚಿಬೀಳುವಂತೆ ಬೆಳಗಾವಿಯಲ್ಲಿ ಜೈನ ಮುನಿಗಳ ಭೀಕರ ಹತ್ಯೆಯಾಗಿದೆ. ಇಡೀ ದೇಶವೇ ಇದಕ್ಕೆ ಕಂಬನಿ ಮಿಡಿದಿದೆ. ಸೂಕ್ತವಾದ ತನಿಖೆ ಆಗಬೇಕು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಜೈನ ಸಮುದಾಯದವರಿಂದ ಹಿಡಿದು ಪ್ಲತಿಯೊಬ್ಬರೂ ಸರ್ಕಾರದ ಬಾಗಿಲು ತಟ್ಟುತ್ತಿದ್ದಾರೆ. ಅನೇಕ ಮುನಿವರ್ಯರು, ಭಟ್ಟಾಚಾರ್ಯರು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ. ಅದೇ ಸಮುದಾಯದವರಾದ ಹೆಗ್ಗಡೆಯವರೂ ಕೂಡ ಸಂತಾಪ ಸೂಚಿಸಿದ್ದರು. ಆದರೆ ತನಿಖೆ ಕುರಿತು ಈ ರೀತಿಯ ಮನವಿಯನ್ನು ಪತ್ರದ ಮುಖೇನ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರಾ? ಫ್ರೀ ಬಸ್ ಯಿಂದ ಧರ್ಮಸ್ಥಳಕ್ಕೆ ಜನ ಬರ್ತಿದ್ದಾರೆ, ಧನ್ಯವಾದ ಎಂದು ಹೇಳುವ ಹೆಗ್ಗಡೆಯವರು ತಮ್ಮ ಸಮುದಾಯದ ಮುನಿಗಳ ಕೊಲೆಗೆ ನ್ಯಾಯ ಕೇಳಿದ್ದಾರಾ? ಎನ್ನುವುದು ಇಲ್ಲಿ ನುಸುಳುವ ಪ್ರಶ್ನೆ.
ಹಾಗೇನಾದರೂ ಪತ್ರ ಬರೆದು ಮನವಿ ಮಾಡಿದ್ದರೆ ಅದಕ್ಕೆ ಎಲ್ಲರ ಸಂಪೂರ್ಣ ಬೆಂಬಲವಿದೆ. ಬರೆದಿರಲಿಕ್ಕೂ ಸಾಕು. ಯಾಕೆಂದರೆ ಸರ್ಕಾರ ಅಂತಹ ಪತ್ರಗಳನ್ನೆಲ್ಲ ಬಹಿರಂಗ ಪಡಿಸುವುದಿಲ್ಲ. ತನ್ನ ಕಾರ್ಯಗಳನ್ನು ವಿರೋಧ ಪಕ್ಷಗಳಾದಿಯಾಗಿ ಎಲ್ಲರೂ ವಿರೋಧಿಸಿದರೆ, ಅಂತವನ್ನು ಸಮಾಜದಲ್ಲಿರೋ ಗಣ್ಯರು ಯಾರಾದರೂ ಗುರುತಿಸಿದರೆ, ಶ್ಲಾಘಿಸಿ ಪತ್ರಗಳನ್ನು ಬರೆದರೆ ಇಲ್ಲ ಟ್ವೀಟ್ ಮಾಡಿದರೆ ಅದನ್ನು ಬೇಗ ಹಂಚಿಕೊಂಡು ಬಿಡುತ್ತವೆ. ಇಲ್ಲೂ ಹಾಗಾಗಿರಬಹುದು. ಆದರೂ ಧರ್ಮಸ್ಥಳಕ್ಕೆ ಜನ ಬರಲು ಅನುಕೂಲ ಮಾಡಿಕೊಟ್ಟ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ್ದು ಎಷ್ಟರ ಮಟ್ಟಿಗೆ ಸರಿ ? ಯೋಚಿಸಿ.
ಇದೇ ಧರ್ಮಸ್ಥಳದ ಪಕ್ಕದ ಕನ್ಯಾಡಿಯಿಂದ ಮಹಿಳೆಯರು ಉಚಿತ ಬಸ್ಸು ಇದೆಯೆಂದು 60 ಕಿಲೋಮೀಟರ್ ದೂರದ ಪರಂಗಿಪೇಟೆಗೆ ಮೀನು ತರಲು ಹೋಗುತ್ತಾರೆ. ಮಂಗಳೂರು ಭಾಗದ ಎಲ್ಲರಿಗೂ ಗೊತ್ತಿರುವಂತೆ ಫರಂಗಿಪೇಟೆಯಲ್ಲಿಹತ್ತಾರು ಮೀನು ಅಂಗಡಿಗಳಿದ್ದು, ಅಲ್ಲಿ ಮೀನು ಅಗ್ಗವಾಗಿ ದೊರೆಯುತ್ತದೆ. ಹೀಗೆ, ಅನಗತ್ಯ ಪ್ರಯಾಣ ಬೆಳೆಸುತ್ತ ಶಕ್ತಿ ಯೋಜನೆಯ ಮಿಸ್ ಯೂಸ್ ಆಗೋದು ಯಾರಿಗೆ ಗೊತ್ತುಂಟು ? ಇವತ್ತು ರಾಜ್ಯದ ಇಡೀ ಆಟೋ, ಟ್ಯಾಕ್ಸಿ ಚಾಲಕರು ವ್ಯಾಪಾರ ಇಲ್ಲದೆ ಬೀದಿಯಲ್ಲಿ ಬಿಸಿಯಾಗಿ ಒಣಗುತ್ತಾ ಸದಾ ನಿಂತೇ ಇರುವ ಆಟೋ ಬೆನ್ನಿಗೆ ಒರಗಿ ಗಿರಾಕಿಗಾಗಿ ಕಾಯುತ್ತಾ ನಿಲ್ಲುವ ದೃಶ್ಯ ಯಾರ ಕಣ್ಣಿಗೆ ಕಾಣಿಸಿದೆ ? ಅದರ ಬಗ್ಗೆ ಯಾರು ಮನವಿ ಪತ್ರ ಹಿಡಕೊಂಡು ಹೋಗಿದ್ದಾರೆ ? ಇಂತಹ ಸಮಾಜ ಸುಧಾರಕರು ಅಂತವರ ಪರ ಧ್ವನಿ ಎತ್ತಿದರೆ ಎಷ್ಟು ಉಪಯೋಗವಾಗುತ್ತದೆ ಅಲ್ಲವೇ ? ಸ್ವಾರ್ಥ ಇರಲಿ, ಆದರೆ ಅದಕ್ಕೊಂದು ಸಣ್ಣಅಲ್ಪ ವಿರಾಮ ಕೂಡಾ ಜೊತೆಗಿಟ್ಟುಕೊಂಡಿರಲಿ.
